ಧಾರವಾಡ: ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರು ಧಾರವಾಡದಲ್ಲಿ ಸ್ಥಾಪನೆ ಮಾಡಲು ಮುಂದಾಗಿರುವ ತಂಪು ಪಾನೀಯ ಉದ್ಯಮಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಪರಿಸರವಾದಿ ಸುರೇಶ್ ಹೆಬ್ಳೀಕರ್ ನೇತೃತ್ವದಲ್ಲಿ ವಿರೋಧ ವ್ಯಕ್ಯವಾಗಿದ್ದು, ತಂಪು ಪಾನೀಯ, ಎನರ್ಜಿ ಡ್ರಿಂಕ್ ಹಾಗೂ ಅವುಗಳ ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಮೆ.ಸಿಲೋನ್ ಬಿವರೇಜ್ ಕ್ಯಾನ್ ಪ್ರೆವೈಟ್ ಲಿಮಿಟೆಡ್ ಕಂಪನಿ ಸ್ಥಾಪನೆಗೆ ಮುತ್ತಯ್ಯ ಮುರಳಿಧರನ್ ಮುಂದಾಗಿದ್ದರು.
ಕಂಪನಿ ಅಡಿ 900 ಕೋಟಿ ಹೂಡಿಕೆಗೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಸ್ಥಳ ಫೈನಲ್ ಮಾಡಿದ್ದರು. ಎಫ್ಎಂಸಿಜಿ ಘಟಕದ ಅಡಿ ಘಟಕ ಸ್ಥಾಪನೆಗೆ ಈಗಾಗಲೇ ಬಹುತೇಕ ಸರ್ಕಾರ ಒಪ್ಪಿಕೊಂಡಿದೆ. ಕೆಲ ಷರತ್ತುಗಳಿಗೆ ಸರ್ಕಾರ ಒಪ್ಪಿಗೆ ಕೂಡಾ ನೀಡಿದೆ. ಷರತ್ತಿನ ಪ್ರಕಾರ ನಿತ್ಯ 20 ಲಕ್ಷ ಲೀಟರ್ ನೀರು ಪೂರೈಕೆಯಾಗಬೇಕು. ಇಷ್ಟು ಪ್ರಮಾಣದ ನೀರಿಗೆ ಬೇಡಿಕೆ ಇಟ್ಟಿರೋ ಕಂಪನಿ ನಮಗೆ ಬೇಕಾ ಎಂದು ಹೆಬ್ಳೀಕರ್ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರವಾದಿ ಸುರೇಶ್ ಹೆಬ್ಳೀಕರ್ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿದೆ.
20 ಲಕ್ಷ ಲೀಟರ್ ನೀರು ನಿತ್ಯ 15 ಲಕ್ಷ ಜನರಿಗೆ ಕೊಡಬಹುದು. ಧಾರವಾಡದಲ್ಲಿ ಸ್ಥಳೀಯ ಜಲಮೂಲ ಇಲ್ಲದಾಗಿದೆ. ಹೀಗಿರುವಾಗ ಇಷ್ಟೊಂದು ನೀರು ಬೇಡುವ ಉದ್ಯಮ ಬೇಡ ಎನ್ನುವ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಮುತ್ತಯ್ಯ ಮುರಳೀಧರನ್ ಫ್ಯಾಕ್ಟರಿ ಸ್ಥಾಪನೆಗೆ ಕಂಟಕ ಎದುರಾಗೋ ಸಾಧ್ಯತೆಯಿದೆ. ಬೇರೆ ಉದ್ಯಮಗಳು ಬರಲಿ, ಆದರೆ, ನೀರು ಕೇಳುವ ಉದ್ಯಮ ಬೇಡ ಅಂತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ನಮ್ಮದೇ ನೀರು ತೆಗೆದುಕೊಂಡು ಅದಕ್ಕೆ ಒಂದಷ್ಟು ಪದಾರ್ಥ ಸೇರಿಸಿ ಮಾರುತ್ತಾರೆ. ಇಂತಹ ಉದ್ಯಮ ಬೇಕಾ? ಎಂದು ಪರಿಸರವಾದಿ ಹೆಬ್ಳೀಕರ್ ಪ್ರಶ್ನಿಸಿದ್ದಾರೆ.
ಯೋಜನೆ ಹೀಗಿದೆ: ಶ್ರೀಲಂಕಾದಲ್ಲಿ ಸಿಲೋನ್ ಬೇವರೆಜಸ್ ಕ್ಯಾನ್ ಕಂಪನಿ ಮೂಲಕ ತಂಪು ಪಾನೀಯ ಮತ್ತು ಎನರ್ಜಿ ಡ್ರಿಂಕ್ ಉತ್ಪಾದನಾ ಉದ್ಯಮದಲ್ಲಿ ತೊಡಗಿರುವ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಧಾರವಾಡದಲ್ಲಿ ತಮ್ಮದೇ ತಂಪು ಪಾನೀಯ ಉದ್ಯಮ ಆರಂಭಿಸಲು ಯೋಜಿಸಿದ್ದಾರೆ. ಇದಕ್ಕಾಗಿ ಕಳೆದ ವಾರವಷ್ಟೇ ಮುತ್ತಯ್ಯ ಮುರಳೀಧರನ್ ಅವರು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಬಳಿ ಇರುವ ಜಮೀನು ವೀಕ್ಷಣೆ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆಗೆ ಎಫ್ಎಂಸಿಜಿ ಕ್ಲಸ್ಟರ್ ಅಡಿ ಸುಮಾರು 900 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದಾರೆ.
ಮೊದಲ ಹಂತದಲ್ಲಿ 256.30 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದಾರೆ. ಇದಕ್ಕಾಗಿ 15 ಎಕರೆ ಭೂಮಿ ಒದಗಿಸಲಾಗುತ್ತಿದ್ದು, ಒಟ್ಟು ಮೂರು ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ಯೋಜಿಸಿದೆ. ಇದಕ್ಕಾಗಿ 32 ರಿಂದ 36 ಎಕರೆ ಭೂಮಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಮೂಲಕ ಸುಮಾರು 200 ಜನರಿಗೆ ಇಲ್ಲಿ ಉದ್ಯೋಗವಕಾಶ ಲಭ್ಯವಾಗಲಿದೆ. ಮುರಳೀಧರನ್ ಕಳೆದ ಆ.5 ರಂದು ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸಿದ್ದಾರೆ. ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಕೆಲಸ ಆರಂಭವಾಗುವ ಸಾಧ್ಯತೆಯಿದೆ ಎಂದು ಕೆಐಎಡಿಬಿ ಅಧಿಕಾರಿ ಬಿ.ಟಿ. ಪಾಟೀಲ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ತಂಪು ಪಾನೀಯದ ಫ್ಯಾಕ್ಟರಿ ಆರಂಭಿಸುತ್ತಿದ್ದಾರೆ ಲಂಕಾ ಸ್ಪಿನ್ ಮಾಂತ್ರಿಕ ಮುರಳೀಧರನ್!