ಹುಬ್ಬಳ್ಳಿ: ಭೂಮಿಯ ಮೇಲಿನ ಸಂಪನ್ಮೂಲಗಳನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವತ್ತ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದ್ದು, ಪವನ ಶಕ್ತಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಾದ ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಎರಡು ಪವನ ಶಕ್ತಿ ವಿದ್ಯುತ್ ಯೋಜನೆ ಆರಂಭಿಸಲು ರಾಜ್ಯ ಸರ್ಕಾರ ಮುಂಬೈ ಮೂಲದ ಜೆ.ಎಸ್.ಡಬ್ಲ್ಯೂ ಎನರ್ಜಿ ಲಿ. ಕಂಪನಿಗೆ ಅನುಮತಿ ನೀಡಿದೆ. ಯೋಜನೆ ಸ್ಥಾಪನೆಗೆ ಅನುಮತಿ ಪಡೆದ ಕಂಪನಿ 8,860 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಇನ್ವೆಸ್ಟ್ ಮೀಟ್‌ನಲ್ಲಿ ಈ ಕುರಿತು ಒಪ್ಪಂದ ಏರ್ಪಟ್ಟಿತ್ತು.
ಜೆ.ಎಸ್.ಡಬ್ಲ್ಯೂ ಕಂಪನಿ ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಈಗಾಗಲೇ 1,350 ಎಕರೆ ಖಾಸಗಿ ಜಮೀನನ್ನು ಒಪ್ಪಂದದ ಮೇಲೆ ಪಡೆದಿದೆ. ಇಲ್ಲಿ ಯೋಜನೆಗೆ 3,900 ಕೋಟಿ ಹೂಡಿಕೆ ಮಾಡಿ, ಪ್ರತಿ ವರ್ಷ 600 ಮೆಗಾ ವ್ಯಾಟ್ಸ್ ಪವನ ಶಕ್ತಿ ವಿದ್ಯುತ್ ಉತ್ಪಾದಿಸಲಿದೆ.
ಅದೇ ರೀತಿ, ಬಳ್ಳಾರಿ, ಧಾರವಾಡ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ 1,800 ಎಕರೆ ಖಾಸಗಿ ಜಮೀನು ಒಪ್ಪಂದದ ಮೇಲೆ ಪಡೆದು, 4,960 ಕೋಟಿ ವಿನಿಯೋಗಿಸಲಿದೆ. ಪ್ರತಿ ವರ್ಷ 800 ಮೆಗಾ ವ್ಯಾಟ್ಸ್ ವಿದ್ಯುತ್ ಶಕ್ತಿ ಉತ್ಪಾದಿಸುವ ನಿರೀಕ್ಷೆಯಿದೆ.