ಹುಬ್ಬಳ್ಳಿ:'ತೊಟ್ಟಿಲುಗಳೆಷ್ಟೋ ಮಸಣಗಳಷ್ಟು ಧರೆಯೊಳಗೆ' ಎಂಬ ಡಿ.ವಿ.ಗುಂಡಪ್ಪನವರ ವಾಣಿ, ಹುಟ್ಟು ಸಾವುಗಳನ್ನು ಸಮಾನ ಮನಸ್ಸಿನಿಂದ ನೋಡುವ ದೃಷ್ಟಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ಆದರೆ, ಬಹುತೇಕರು ಸ್ಮಶಾನಗಳ ಬಗ್ಗೆ ಅವ್ಯಕ್ತವಾದ ಭಯ ಬೆಳಸಿಕೊಂಡಿದ್ದಾರೆ. ನಿಜ, ಹುಟ್ಟಿಗೆ ಸಂಭ್ರಮಿಸುವ ನಾವೆಲ್ಲರೂ ಸಾವಿಗೆ ದುಃಖಿಸುತ್ತೇವೆ.
ಕೋವಿಡ್ ಮಹಾಮಾರಿ ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಆಪ್ತರನ್ನು ಕಳೆದುಕೊಂಡವರು ಕೋವಿಡ್ ನಿಯಮಗಳ ಪ್ರಕಾರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಹೆಣಗಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತರಾದವರ ಅಂತ್ಯ ಸಂಸ್ಕಾರವನ್ನು ಉಚಿತವಾಗಿ ನೆರವೇರಿಸುತ್ತಿದೆ.
ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಸತ್ತವರನ್ನು ಹೂಳಲು ಜಾಗ ಹಾಗೂ ಸುಡಲು ಕಟ್ಟಿಗೆಯ ಕೊರತೆ ಉಂಟಾಗುತ್ತಿದೆ. ನಗರದಲ್ಲಿನ ಮುಕ್ತಿಧಾಮಗಳು ಈ ಸಮಸ್ಯೆಯಿಂದ ಪಾರಾಗಲು ನವೀನ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಮುಕ್ತಿಧಾಮಗಳಲ್ಲಿ ವಿದ್ಯುತ್ ಹಾಗೂ ಗ್ಯಾಸ್ ಆಧರಿಸಿ ಶವ ಸಂಸ್ಕಾರ ನೇರವೇರಿಸುವ ವಿಧಾನಗಳನ್ನು ಅನುಸರಿಸಲಾಗುತ್ತದೆ.
ಹುಬ್ಬಳ್ಳಿ - ಧಾರವಾಡ ರಾಜ್ಯ ಎರಡನೇ ಅತಿ ದೊಡ್ಡ ನಗರವಾಗಿದೆ. ಇಲ್ಲಿಯ ವಿದ್ಯಾನಗರದ ಮುಕ್ತಿಧಾಮವನ್ನು 2.11 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದೆ. ಕೆನರಾ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕಾ ನಿಧಿಯಡಿ ಮುಕ್ತಿಧಾಮದ ನವೀಕರಣಕ್ಕೆ ಅನುದಾನ ನೀಡಿದೆ.
ಮೇ. 30, ಭಾನುವಾರದಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮುಕ್ತಿಧಾಮದ ನವೀಕರಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಮುಕ್ತಿಧಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ, 11 ಲಕ್ಷ ವೆಚ್ಚದ ಫ್ರೀಜರ್ ಬಾಕ್ಸ್‌ಗಳನ್ನು ಒದಗಿಸಲಾಗುತ್ತಿದೆ. ನಿರ್ಮಿತಿ ಕೇಂದ್ರ ಕಾಮಗಾರಿ ಅನುಷ್ಠಾನಗೊಳಿಸುತ್ತಿದೆ. ಆಗಸ್ಪ್ 31 ಒಳಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಕೆನರಾ ಬ್ಯಾಂಕ್ ಹುಬ್ಬಳ್ಳಿ ವೃತ್ತದ ಮುಖ್ಯಸ್ಥ ಹಾಗೂ ಮಹಾಪ್ರಬಂಧಕ ಜಿ.ಎಸ್.ರವಿಕುಮಾರ್, ಉಪ ಮಹಾಪ್ರಬಂಧಕ ಜಿ.ಶ್ರೀನಿವಾಸ್, ಕ್ಷೇತ್ರೀಯ ಕಾರ್ಯಾಲಯದ ಮುಖ್ಯಸ್ಥ ರತಿಕಾಂತ್ ಡೋರಾ ಶಂಕುಸ್ಥಾಪನೆ ಕಾರ್ಯದ ವೇಳೆ ಹಾಜರಿದ್ದರು.