ಧಾರವಾಡ: ಉತ್ತರ ಕರ್ನಾಟಕದ ಬಹುದೊಡ್ಡ ಸಹಕಾರಿ ಬ್ಯಾಂಕ್ ಎಂಬ ಶ್ರೇಯಸ್ಸು ಹೊಂದಿರುವ ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ ಆಪ್ ಬ್ಯಾಂಕ್ನ ನಿರ್ದೇಶಕ ಮಂಡಳಿ ಸದಸ್ಯರ ಆಯ್ಕೆಯ ಚುನಾವಣಾ ಕಾವು ಜೋರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗಿದು ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಧಾರವಾಡ, ಗದಗ, ಹಾವೇರಿ ಜಿಲ್ಲಾ ಕ್ಷೇತ್ರ ವ್ಯಾಪ್ತಿಯನ್ನು ಈ ಬ್ಯಾಂಕ್ ಹೊಂದಿದೆ. ಈ ಹಿಂದೆ ಹಾವೇರಿ ಮತ್ತು ಗದಗ ಧಾರವಾಡ ಜಿಲ್ಲೆಯಲ್ಲಿದ್ದವು. ಆ ಸಮಯದಲ್ಲಿ ಆರಂಭಗೊಂಡ ಬ್ಯಾಂಕ್ ಜಿಲ್ಲೆಗಳ ವಿಭಜನೆ ಬಳಿಕ ಮೂರು ಜಿಲ್ಲೆಗೆ ಸೇರಿಯೇ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್ ನಿರ್ದೇಶಕ ಮಂಡಳಿಯ 20 ಸ್ಥಾನಗಳಿಗೆ ಸೆಪ್ಟೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಅದಕ್ಕಾಗಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದೆ.
ಮೇಲ್ನೋಟಕ್ಕೆ ಇಲ್ಲಿ ನೇರವಾಗಿ ರಾಜಕೀಯ ಪಕ್ಷಗಳು ಇಲ್ಲದೇ ಹೋದರೂ, ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆದಿದೆ. ಒಟ್ಟು 20 ಸ್ಥಾನಗಳ ಪೈಕಿ ಹಾವೇರಿ ಜಿಲ್ಲೆಗೆ 7 ಹಾಗೂ ಗದಗ ಮತ್ತು ಧಾರವಾಡ ಜಿಲ್ಲೆಗೆ ತಲಾ 5 ಸ್ಥಾನಗಳಿವೆ. ಅದರಲ್ಲಿಯೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದಿಂದ ಪ್ರತಿ ತಾಲೂಕಿಗೆ 1 ರಂತೆ 17 ಸ್ಥಾನ ಹಾಗೂ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಪಟ್ಟಣ ಸಹಕಾರ ಬ್ಯಾಂಕ್ಗಳ ಕೃಷಿಯೇತರ ಸಹಕಾರ ಸಂಘ ಮತ್ತು ಇತರೆ ಸಹಕಾರ ಸಂಘಗಳಿಂದ ತಲಾ 1 ಸ್ಥಾನದ ಆಯ್ಕೆ ನಡೆಯಬೇಕು. ಚುನಾವಣೆಯಲ್ಲಿ ಮೂರು ಜಿಲ್ಲೆಗಳಲ್ಲಿರುವ ಸಹಕಾರ ಸಂಘಗಳ ಸದಸ್ಯರೇ ಇಲ್ಲಿ ಮತದಾರರು. ಹೀಗಾಗಿ 20 ಸ್ಥಾನಗಳಿಗಾಗಿ ಈಗಾಗಲೇ 70ಕ್ಕೂ ಹೆಚ್ಚು ಜನ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ. ವಿವಿಧ ರಾಜಕೀಯ ನಾಯಕರು ತಮ್ಮ ಬೆಂಬಲಿಗರ ಪರವಾಗಿ ನಾಮಪತ್ರ ಸಲ್ಲಿಸಲು ಕೆಸಿಸಿ ಬ್ಯಾಂಕ್ಗೆ ಬರುತ್ತಲೇ ಇದ್ದು, ಸದ್ಯ ಧಾರವಾಡ ಸಹಕಾರ ವಲಯದ ದೊಡ್ಡ ಚುನಾವಣೆಗೆ ಸಾಕ್ಷಿಯಾಗುತ್ತಿದೆ. ಇರುವ 20 ಸ್ಥಾನಗಳಲ್ಲಿ 11 ಅಥವಾ 11ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಪಕ್ಷದ ಪ್ಯಾನಲ್ಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಗುತ್ತದೆ. ಸದ್ಯಕ್ಕೆ 70ಕ್ಕೂ ಹೆಚ್ಚು ನಾಮಪತ್ರಗಳ ಸಲ್ಲಿಕೆಯಾಗಿದ್ದು, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಇಂದು ಸಂಜೆ ಮಹತ್ವದ ಸಚಿವ ಸಂಪುಟ ಸಭೆ: ಕಾವೇರಿ ಬಿಕ್ಕಟ್ಟು ಚರ್ಚೆ, ಮುಂದಿನ ನಡೆ ಬಗ್ಗೆ ತೀರ್ಮಾನ