ಹುಬ್ಬಳ್ಳಿ: ಆಕೆ ವಿದ್ಯಾರ್ಥಿನಿಯ ಸೋಗಿನಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಳು. ಮಕ್ಕಳು ಕುಡಿಯುವ ಸೆರಲ್ಯಾಕ್ ಡಬ್ಬಿಯಲ್ಲಿಯೇ ಕೈಚಳಕ ತೋರಿಸಿ ಮನುಕುಲಕ್ಕೆ ಮಾರಕವಾಗಲು ಹೊರಟಿದ್ದವಳು ಈಗ ಜೈಲು ಸೇರಿದ್ದಾಳೆ.
ನಗರದ ರೈಲು ನಿಲ್ದಾಣದಲ್ಲಿ ಉಗಾಂಡ ಮೂಲದ ಮಹಿಳೆಯು ಸೆರಲ್ಯಾಕ್ ಡಬ್ಬಿಯಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ 995 ಗ್ರಾಂ 'ಮೆಥ್ ಅಪಟಮೈನ್' ಡ್ರಗ್ ಇಟ್ಟುಕೊಂಡು ರೈಲಿನ ಮೂಲಕ ಸಾಗಣೆ ಮಾಡುತ್ತಿದ್ದಳು. ಈಕೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳಿಂದ ಕಳೆದ ಶುಕ್ರವಾರ ಬಂಧನಕ್ಕೊಳಗಾಗಿದ್ದಾಳೆ. ಪೊಲೀಸರ ಕಣ್ಣು ತಪ್ಪಿಸಲು ಈಕೆ ವಿದ್ಯಾರ್ಥಿನಿ ಸೋಗಿನಲ್ಲಿ ದೆಹಲಿಗೆ ಬಂದಿದ್ದಳು ಎಂಬುದೀಗ ಬಯಲಾಗಿದೆ.
ಉಗಾಂಡದ ನಗೈ ಅಗ್ನೆಸ್ (30) ವಿದ್ಯಾರ್ಥಿನಿ ವೀಸಾ ಪಡೆದು 9 ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದಾಳೆ. 2024ರವರೆಗೆ ಈಕೆಗೆ ದೇಶದಲ್ಲಿರಲು ಅನುಮತಿ ಇದೆ. ದೆಹಲಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುವ ನೆಪದಲ್ಲಿ ಬಂದಿದ್ದಾಳೆ. ಈಕೆಗೆ ದೆಹಲಿಯಲ್ಲಿರುವ ಉಗಾಂಡ ಮೂಲದ ಅದನ್ ಎಂಬ ವ್ಯಕ್ತಿ ಬೆಂಗಳೂರಿಗೆ ಡ್ರಗ್ ಸಾಗಣೆ ಮಾಡಲು ಸೂಚಿಸಿದ್ದಾನೆ. ಆತ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಡ್ರಗ್ ಸಾಗಣೆಗೆ ವ್ಯವಸ್ಥೆ ಮಾಡಿದ್ದ. ಅದಕ್ಕಾಗಿ ಆಕೆಯನ್ನು ಮಾನಸಿಕವಾಗಿ ಸಜ್ಜುಗೊಳಿಸಿದ್ದು, ಸೆರಲ್ಯಾಕ್ನಲ್ಲಿ ಯಾರಿಗೂ ಅನುಮಾನ ಬಾರದಂತೆ ಸಾಗಿಸುವಂತೆ ಸೂಚಿಸಿದ್ದಾನೆ.
ಬೆಂಗಳೂರು ರೈಲು ನಿಲ್ದಾಣದಲ್ಲಿ ತನ್ನ ಸಹಚರನೊಬ್ಬ ಬಂದು ನಿನ್ನನ್ನು ಪಿಕಪ್ ಮಾಡುತ್ತಾನೆಂದು ತಿಳಿಸಿ ರೈಲು ಹತ್ತಿಸಿದ್ದಾನೆ. ಒಂದೂವರೆ ಕೋಟಿ ರೂ.ಮೌಲ್ಯದ ಡ್ರಗ್ ದೆಹಲಿಯಿಂದ ಬೆಂಗಳೂರಿಗೆ ಸಾಗಿಸಲು ದೆಹಲಿಯಲ್ಲಿರುವ ಅದನ್ ಈಕೆಯ ಕೈಗೆ 20 ಸಾವಿರ ರೂ. ಮುಂಗಡವಾಗಿ ನೀಡಿದ್ದನಂತೆ. ರೈಲು ಟಿಕೆಟ್ ಬುಕ್ ಮಾಡಿ, ಉಳಿದ ಹಣ ನಂತರ ನೀಡುವುದಾಗಿ ಹೇಳಿದ್ದನಂತೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶನಿವಾರ ಈಕೆಯನ್ನು ಬಂಧಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಈಕೆಯನ್ನು ಜ.10 ರವರೆಗೆ ಮೂರು ದಿನಗಳ ಕಾಲ ವಶಕ್ಕೆ ಪಡೆದಿರುವ ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ. ದೆಹಲಿಯಲ್ಲಿ ಓದುತ್ತಿರುವ ಕಾಲೇಜು ಯಾವುದು? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.