ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೊದಲಿದ್ದ ಕುಡಿಯುವ ನೀರಿನ ಯೋಜನೆಯನ್ನು ಸರ್ಕಾರ ಎಲ್ ಆ್ಯಂಡ್ ಟಿಗೆ ನೀಡುವ ಮೂಲಕ ವ್ಯವಸ್ಥೆಯನ್ನು ಹಾಳು ಮಾಡಿದೆ ಎಂದು ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಲಯ ಅಧಿಕಾರಿಗಳು ಹಾಗೂ ಎಲ್ ಆ್ಯಂಡ್ ಟಿ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ಮೊದಲು ಕುಡಿಯುವ ನೀರಿನ ಸಮಸ್ಯೆ ಇರಲಿಲ್ಲ. ಎಲ್ ಆ್ಯಂಡ್ ಟಿಗೆ ಹಸ್ತಾಂತರಿಸಿದ ಮೇಲೆ ಈ ಸಮಸ್ಯೆ ಹುಟ್ಟಿಕೊಂಡಿದ್ದು, ನಯಾ ಪೈಸೆಯಷ್ಟು ಕೂಡ ತೃಪ್ತಿ ತಂದಿಲ್ಲ ಎಂದರು.
ನದಿಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅವಳಿನಗರದ ಜನರಿಗೆ ಕುಡಿಯಲು ನೀರಿನ ಸಮಸ್ಯೆಯಿಲ್ಲ. ಅಲ್ಲದೇ ಅಮ್ಮಿನಬಾವಿವರೆಗೂ ನೀರನ್ನು ತರಲಾಗಿದೆ. ಆದರೆ ಎಲ್ ಆ್ಯಂಡ್ ಟಿ ಅವರ ಅವ್ಯವಸ್ಥಿತ ನಿರ್ವಹಣೆಯಿಂದ ಸಮಸ್ಯೆ ಉದ್ಭವಗೊಂಡಿದೆ. ಈಗಾಗಲೇ ಸುಮಾರು ಬಾರಿ ತಾಕೀತು ಮಾಡಿ ಹೇಳಿದರೂ ಸಮಸ್ಯೆ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರಕ್ಕೆ ಪತ್ರ ಬರೆದು ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಲಾಗುತ್ತದೆ ಎಂದರು. ಈಗಾಗಲೇ ಹನ್ನೆರಡು ವಲಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ಕೂಡಲೇ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಅವಳಿನಗರದ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹುಬಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ: ಪಾಲಿಕೆ ವಿರುದ್ಧ ಜನರ ಆಕ್ರೋಶ..