ಧಾರವಾಡ: ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನೀರಸಾಗರ ಕೆರೆ ಹೂಳೆತ್ತುವ ಕಾಮಗಾರಿಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮತ್ತು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.
1955ರಿಂದ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಲಾಗಿರುವ ನೀರಸಾಗರ ಕೆರೆಯಿಂದ 2003ರಲ್ಲಿ ಸುಮಾರು ₹4 ಕೋಟಿ ವೆಚ್ಚದಲ್ಲಿ 7.72 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ತೆಗೆಯಲಾಗಿತ್ತು. ಇದರ ಪರಿಣಾಮ 2009ರಲ್ಲಿ ಕೆರೆ ಸಂಪೂರ್ಣ ತುಂಬಿತ್ತು. ನಂತರದ ವರ್ಷದಿಂದ ಮಳೆ ಕಡಿಮೆಯಾಗಿ ನೀರಸಾಗರ ಕೆರೆಗೆ ನೀರಿನ ಕೊರತೆ ಉಂಟಾಗಿದೆ.
ಕಳೆದ ಮೂರು ವರ್ಷದಿಂದ ನೀರು ಸರಬರಾಜು ನಿಲ್ಲಿಸಲಾಗಿತ್ತು. ಇತರರ ಸಹಾಯದಿಂದ ಜಿಲ್ಲಾ ಉಸ್ತುವಾರಿ ಸಚಿವರು ಕೆರೆಗೆ ಮರುಜೀವ ನೀಡಿದ್ದಾರೆ ಎಂಬುದು ಫಲಾನುಭವಿಗಳ ಅಭಿಪ್ರಾಯವಾಗಿದೆ.
ಮೊದಲ ಹಂತವಾಗಿ ಶನಿವಾರ ಕೆರೆಯ ಅಂಗಳದ ಸುಮಾರು 100 ಎಕರೆ ಪ್ರದೇಶದ ಅಂದಾಜು 12 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣು ತೆಗೆಯುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.