ಹುಬ್ಬಳ್ಳಿ: ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಮಹಿಳೆಯರು ತಮ್ಮದೇ ಆದ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಈ ಸ್ಪರ್ಧೆಯನ್ನು ಶ್ರೀ ಕಾಮಾಕ್ಷಿ ಮಹಿಳಾ ಮಂಡಳ ಏರ್ಪಡಿಸಿದ್ದು, ಎಲ್ಲರಿಗೂ ಮಾದರಿಯಾಗಿದೆ.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಕಾಮಾಕ್ಷಿ ಮಹಿಳಾ ಮಂಡಳಿಯು 150ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ತನ್ನ ಎಲ್ಲಾ ಸದಸ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಕುರಿತು ಚಿತ್ರಕಲೆ ಮತ್ತು ಕೈ ಬರಹದ ಘೋಷಣೆ ಬರೆಯುವ ಸ್ಪರ್ಧೆ ಏರ್ಪಡಿಸಿತ್ತು. ಜೊತೆಗೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಬರೆದು ತಮ್ಮ ತಮ್ಮ ಮನೆಗೆ ಅಂಟಿಸಿ ಅದರ ಫೋಟೋ ಕಳುಹಿಸುವ ಸ್ಪರ್ಧೆ ಇದಾಗಿತ್ತು.

ಆನ್‌ಲೈನ್ ಮೂಲಕ ಬಂದ ಸ್ಪರ್ಧಾರ್ಥಿಗಳ ಚಿತ್ರ ಮತ್ತು ಘೋಷ ವಾಕ್ಯಗಳನ್ನು ವೀಕ್ಷಿಸಿ, ಉತ್ತಮ ಚಿತ್ರ ಹಾಗೂ ಆಕರ್ಷಕ ಬರವಣಿಗೆ ಬರೆದವರನ್ನು ಗುರಿತಿಸಲಾಗಿದೆ. ಅವರಿಗೆ ಸೂಕ್ತ ಬಹುಮಾನ ಕೂಡಾ ನೀಡಲಾಗುತ್ತಿದೆ.
ಕೈಬರಹ-ಚಿತ್ರದಲ್ಲಿ ಏನಿದೆ?: ಕೊರೊನಾ ಸೋಂಕು ದೇಹವನ್ನು ಪ್ರವೇಶಿಸದಂತೆ ಹೇಗೆ ತಡೆಯಬೇಕು? ಮನೆಯಲ್ಲಿಯೇ ಇರುವುದರಿಂದ ಆಗುವ ಲಾಭಗಳೇನು? ದಿನಕ್ಕೆ ಎಷ್ಟು ಬಾರಿ ಕೈಗಳನ್ನು ತೊಳೆದುಕೊಳ್ಳಬೇಕು? ಮಾಸ್ಕ್ ಧರಿಸುವುದರಿಂದ ಆಗುವ ಲಾಭಗಳೇನು? ವೈರಸ್ ಸೋಂಕಿಗೆ ಒಳಗಾದವರನ್ನು ಹೇಗೆ ಚಿಕಿತ್ಸೆಗೆ ಒಳಪಡಿಸಬೇಕು? ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗೆ ಹೇಗೆ? ಜೀವಕ್ಕೆ ಮಾರಕವಾದ ಕೊರೊನಾ ಸೋಂಕು ರಚನೆಯಲ್ಲಿ ಹೇಗಿದೆ? ತರಕಾರಿ ಮತ್ತು ಹಣ್ಣುಗಳನ್ನು ಹೇಗೆ ಸ್ವಚ್ಛಗೊಳಿಸಿಕೊಂಡು ಸೇವಿಸಬೇಕು. ಹೀಗೆ ಅನೇಕ ಜಾಗೃತಿ ಚಿತ್ರಗಳನ್ನು ಸದಸ್ಯರು ಬಿಡಿಸಿದ್ದು, ಅವುಗಳನ್ನು ಮನೆಯ ಬಾಗಿಲಿಗೆ, ಗೇಟಿಗೆ ಅಂಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ವಿಜೇತರು ಯಾರು?: ಕೈಬರ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವೀಣಾ ಬಂಢಾರಿ (ಪ್ರಥಮ), ಸ್ಮಿತಾ ಪ್ರಭು, ಸಂಗೀತಾ ಡಿ.(ದ್ವಿತೀಯ) ಹಾಗೂ ಉಮಾ ಪಾಟೀಲ, ಮೀನಾಕ್ಷಿ ವೈ., ಅನುಷಾ ಪಾಟೀಲ, ಕವಿತಾ ಸಾವಳಗಿ, ಸುಹಾಸಿನಿ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ.