ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯನ್ನು ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಉಲ್ಲಂಘಿಸಿದ್ದರು. ಇವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ ತಿಳಿಸಿದ್ದಾರೆ.
ನಗರದ ಬಾಸೆಲ್ ಮಿಷನ್ ಶಾಲಾ ಕಟ್ಟಡದಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಪ್ರಕಟಣೆಯ ನಂತರ ವಿವಿಧ ಅಭ್ಯರ್ಥಿಗಳು ರಾಜ್ಯ ಚುನಾವಣಾ ಆಯೋಗವು ನೀಡಿರುವ ಸದಾಚಾರ ಸಂಹಿತೆಯನ್ನು ಮತ್ತು ಪ್ರಚಾರ ಸಂದರ್ಭದಲ್ಲಿ ಅನುಸರಿಸಬೇಕಾದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ.
ಈ ಕುರಿತು 9 ಅಭ್ಯರ್ಥಿಗಳಿಗೆ ಸ್ಪಷ್ಟೀಕರಣ ಕೇಳಿ ನೋಟಿಸ್ ನೀಡಲಾಗಿದೆ ಮತ್ತು 4 ಅಭ್ಯರ್ಥಿಗಳ ವಿರುದ್ಧ ಆಯಾ ವಾರ್ಡ್‍ಗಳಿಗೆ ನೇಮಿಸಲಾದ ಎಂಸಿಸಿ ಮುಖ್ಯಸ್ಥರಿಂದ ದೂರು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
58ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಶೃತಿ ಚಲವಾದಿ, 59ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಸುವರ್ಣ ಕಲ್ಲಕುಂಟಲಾ ಮತ್ತು 82ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಅಕ್ಷತಾ ಮೋಹನ್ ಅಸುಂಡಿ ಹಾಗೂ 82ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಶಾಂತಾ ಹೊನ್ನಪ್ಪ ಕೋಗೋಡು ಸೇರಿದಂತೆ ಈ 4 ಅಭ್ಯರ್ಥಿಗಳು 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿರುವುದನ್ನು ಎಂಸಿಸಿ ಮುಖ್ಯಸ್ಥರು ವಿಡಿಯೋ ಹಾಗೂ ಫೋಟೋ ಸಹಿತ ದಾಖಲಿಸಿ, ಇವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
1ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರ, 9ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರತಿ ಮಹೇಶ್ ಬೆಳಗಾಂವಕರ, 11ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಸಂಜೀವ್ ಹಿರೇಮಠ, 13ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ರಾಜು ಅಂಬೋರೆ, 73ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಶೋಭಾ ದಶರಥ ವಾಲಿ, 81ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಸಾರಿಕಾ ಮಂಜುನಾಥ ಬಿಜವಾಡ ಮತ್ತು 81ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಶ್ಯಾಮ್ ಜಾಧವ್ ಸೇರಿದಂತೆ 7 ಅಭ್ಯರ್ಥಿಗಳು 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ನೋಟಿಸ್ ನೀಡಲಾಗಿದೆ.
ನೋಟಿಸ್ ನೀಡಲಾಗಿದೆ : ವಾರ್ಡ್ ನಂ.10ರ ಜೆಡಿಎಸ್ ಅಭ್ಯರ್ಥಿ ಲತಾ ಮಂಜುನಾಥ ಆರೇರ ಅವರು ಕಲ್ಮೇಶ್ ದೇವಸ್ಥಾನದಲ್ಲಿ ಪಕ್ಷದ ಚಿಹ್ನೆ ಇರುವ ಶಾಲು ಧರಿಸಿರುವುದು. ಕರಪತ್ರಗಳನ್ನು ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗಿರುವುದು. ಮತ್ತು 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿರುವುದಕ್ಕೆ ಹಾಗೂ 73ನೇ ವಾರ್ಡ್ನ ಬಿಜೆಪಿ ಅಭ್ಯರ್ಥಿ ಶೀಲಾ ಮಂಜುನಾಥ ಕಾಟಕರ ಅವರು ಮೆರವಣಿಗೆ ಹಾಗೂ 5ಕ್ಕಿಂತ ಹೆಚ್ಚು ಜನರೊಂದಿಗೆ ಪ್ರಚಾರದಲ್ಲಿ ತೊಡಗಿರುವುದಕ್ಕೆ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಓದಿ: ಬೆಸ್ಟ್ ನ್ಯೂ ವೆಡ್ಡಿಂಗ್ ಡೆಸ್ಟೀನೇಷನ್ ಇನ್ ಇಂಡಿಯಾ ಪ್ರಶಸ್ತಿಗೆ 'ವಿಜಯಶ್ರೀ ರೆಸಾರ್ಟ್' ಭಾಜನ