ಧಾರವಾಡ : ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕುರಿತಂತೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದ್ರೆ, ಅವರು ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಹೆಚ್.ಡಿ. ಕುಮಾರಸ್ವಾಮಿಯವರ ಬಳಿ ಹೆಚ್ಚಿನ ಮಾಹಿತಿ ಇದೆ. ಡಿಗ್ರಿ, ಬೋಗಸ್ ಸರ್ಟಿಫಿಕೇಟ್ ಕೊಡಿಸುವುದರ ಕುರಿತು ಅವರು ನೇರವಾಗಿ ಹೇಳಿದ್ದಾರೆ. ಗೃಹ ಸಚಿವರು, ಅಶ್ವತ್ಥ್ ನಾರಾಯಣ್ ಸೇರಿ ಆ ಹುಡುಗರನ್ನು ಈಚೆ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರು ವಿಚಾರಣೆಯಲ್ಲಿ ಹೇಳಿದ್ದಾರೆ.
ಅದಕ್ಕಾಗಿಯೇ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ತಾವು ಕ್ಲೀನ್ ಆಗಿ ಉಳಿದುಕೊಳ್ಳಬೇಕಿದೆ. ಸಿಎಂ ಇದರಲ್ಲಿ ಭಾಗಿಯಾಗಿದ್ದಾರೆ ಅಂತಾ ನಾನು ಹೇಳಲಾರೆ. ಸಿಎಂ ಭಾಗಿಯಾಗಿಲ್ಲ ಅಂತಾದರೆ ಭಾಗಿಯಾದವರ ಹೆಸರು ಬಹಿರಂಗಪಡಿಸಬೇಕು.
ಗೃಹ ಸಚಿವರು ತನಿಖೆ ಮಾಡುವವರನ್ನು ಫ್ರೀ ಹ್ಯಾಂಡ್ ಆಗಿ ಬಿಡಬೇಕು. ಏಕೆಂದರೆ, ಗೃಹ ಸಚಿವರೇ ಅಪರಾಧಿ. ಎಲ್ಲ ಕಳ್ಳರ ರಕ್ಷಣೆ ಇವರೇ ಮಾಡುತ್ತಿದ್ದಾರೆ. ಗೃಹ ಸಚಿವ ಮತ್ತು ಅಶ್ವತ್ಥ್ ನಾರಾಯಣ್ ಮೂಗಿನ ಕೆಳಗೆ ಎಲ್ಲ ನಡೆಯುತ್ತಿದೆ ಎಂದು ದೂರಿದರು.
ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗದ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ವಿಚಾರ ಇರಲಿ, ಹಿಂದೆ ವಿಶ್ವನಾಥ್ ಅವರು ಬಿಎಸ್‌ವೈ ಕಮಿಷನ್ ಬಗ್ಗೆ ಹೇಳಿದ್ರು. ಆಗ ವಿಚಾರಣೆ ಮಾಡಿದ್ರಾ?, ಈಗ ಯತ್ನಾಳ್ ₹2500 ಕೋಟಿ ವಿಚಾರ ಹೇಳಿದ್ದಾರೆ. ಮೊದಲು ಅವರಿಗೆ ನೋಟಿಸ್ ಕೊಟ್ಟು ಕರೆಯಿಸಲಿ, ಆ ಮೇಲೆ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗ್ತಾರೆ ಎಂದು ಉತ್ತರಿಸಿದರು.
ಇದನ್ನೂ ಓದಿ: ನನ್ನ ರಾಜಕೀಯ ಜೀವನದಲ್ಲಿ ಬಿಜೆಪಿಯಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರ ನೋಡಿಲ್ಲ: ಡಿಕೆಶಿ