ಧಾರವಾಡ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸ್ವಾಗತಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಡಿಕೆಶಿ ಅಕ್ರಮಗಳ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೆ. ಇದೀಗ ಇಡಿ ಅಧಿಕಾರಿಗಳು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮನವಿ ಮಾಡಲಾಗುವುದು. ಡಿಕೆಶಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡದಂತೆ ಎಚ್ಚರಿಕೆಯಿಂದ ತನಿಖೆ ಮಾಡಬೇಕು. ಡಿಕೆಶಿಯವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಯುವಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ಮಾಜಿ ಸಚಿವ ನಾರ್ದನ್ ರೆಡ್ಡಿ ವಿರುದ್ಧವೂ ಕ್ರಮ ಕೈಗೊಳ್ಳಲು ಬಿಜೆಪಿ ಕೇಂದ್ರ ಸಚಿವರು ಮುಂದಾಗಬೇಕು ಎಂದು ಹಿರೇಮಠ ಆಗ್ರಹಿಸಿದ್ದಾರೆ.
ಡಿಕೆಶಿ ಅಕ್ರಮದ ಬಗ್ಗೆ 2014 ರಲ್ಲೇ ದಾಖಲೆಗಳನ್ನು ನೀಡಲಾಗಿತ್ತು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಅನೇಕ ಭ್ರಷ್ಟರನ್ನು ಜೈಲಿಗೆ ಕಳಿಸುವಂತೆ ಐಟಿ ಹಾಗೂ ಇಡಿಗೆ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಮಾಡಿದವರ ಮಾಹಿತಿ ನಮ್ಮ ಕಡೆ ಇದ್ದು, ಅದೆಲ್ಲವನ್ನು ನೀಡುತ್ತೇನೆ. ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ಇಲಾಖೆಯಲ್ಲಿ 197 ಎಪಿಪಿ ನೇಮಕದಲ್ಲಿ ಅಕ್ರಮವಾಗಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿದೆ ಎಂದು ಇದೇ ವೇಳೆ ಹಿರೇಮಠ ಮಾಹಿತಿ ನೀಡಿದ್ರು.