ಹುಬ್ಬಳ್ಳಿ: ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿಗೆ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಿದ್ದಾರೆ. ಮಠ ದೊಡ್ಡ ಪ್ರಮಾಣಲ್ಲಿ ಬೆಳೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ರೆ ಉದ್ಧಾರ ಮಾಡದೆ ಮಠದ ಆಸ್ತಿಯನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಿಸುತ್ತಿದ್ದಾರೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಮೂರುಸಾವಿರ ಮಠದ ಉನ್ನತ ಮಟ್ಟದ ಸಮಿತಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಭೈರಿದೇವರಕೊಪ್ಪದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠ ಉದ್ಧಾರ ಮಾಡಲು ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ಬಸವರಾಜ್ ಹೊರಟ್ಟಿ, ಜಗದೀಶ್ ಶೆಟ್ಟರ್, ವೀರಣ್ಣ ಮತ್ತೊಕಟ್ಟಿ, ಬಸವರಾಜ್ ಬೊಮ್ಮಾಯಿ, ವಿಜಯ ಸಂಕೇಶ್ವರ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿಯಂತಹ ದೊಡ್ಡವರು ಬಂದಿದ್ದಾರೆ. ಇವರೆಲ್ಲರು ಸೇರಿ ಮಠ ಉದ್ಧಾರ ಮಾಡುತ್ತಾರೆ ಅಂತ ಮಾಡಿದ್ದೆ. ಆದ್ರೆ ಇವರು ಮಠದ ಆಸ್ತಿ ಮಾರಾಟ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಠದ ಬೆಳವಣಿಗೆಯಿಂದ ಬೇಸತ್ತು ವಿಜಯ ಸಂಕೇಶ್ವರ ಅವರು ಮಠದ ಉನ್ನತ ಮಟ್ಟದ ಸಮಿತಿಗೆ ರಾಜೀನಾಮೆ ನೀಡಿದ್ದರು. ಉನ್ನತ ಮಟ್ಟದ ಸಮಿತಿಯವರು ಮಠ ಉದ್ಧಾರ ಮಾಡುವುದನ್ನು ಬಿಟ್ಟು ಮಠದ ಆಸ್ತಿ ತಮಗೆ ಬೇಕಾದವರಿಗೆ ಕೊಡಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಕೇಶ್ವಾಪುರದ ಎರಡು ಎಕರೆ ಜಮೀನು ಕೇವಲ 10 ಲಕ್ಷಕ್ಕೆ ಮಜ್ಜಗಿ ಎನ್ನುವವರಿಗೆ ಮಾರಿಸಿದ್ದಾರೆ ಎಂದು ಆರೋಪಿಸಿದರು.