ಹುಬ್ಬಳ್ಳಿ: ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹಕ್ಕೆ ಹೊಸ ಯೋಜನೆ ರೂಪಿಸಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರ ಅನುಕೂಲಕ್ಕಾಗಿ ತೆರಿಗೆ ಕಟ್ಟಲು ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಮನೆಯಿಂದಲೇ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಜನತೆಗೆ ಆಸ್ತಿ ಕರ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಿದ್ದಾರೆ.
ಭಾರತ ಬಿಲ್ ಪಾವತಿ ವ್ಯವಸ್ಥೆ ಅಡಿಯಲ್ಲಿ ವಿವಿಧ ಆ್ಯಪ್ಗಳ ಮೂಲಕ ತೆರಿಗೆ ಪಾವತಿಸಲು ಪಾಲಿಕೆ ಯೋಜನೆ ಹಾಕಿಕೊಂಡಿದೆ. ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿನ ವಲಯ ಸಹಾಯಕ ಕಚೇರಿ ಹಾಗೂ ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್‌ನ ಕೌಂಟರ್‌ಗಳಲ್ಲಿ ತೆರಿಗೆ ಪಾವತಿ ಮಾಡಲಾಗುತ್ತಿತ್ತು. ಕೌಂಟರ್‌ಗಳಲ್ಲಿ ಬೆಳಿಗ್ಗೆಯಿಂದ ಸಂಜೆಯಯವರೆಗೆ ಕಾಯಬೇಕಾಗುತ್ತಿತ್ತು.
ಇದೀಗ ಆ್ಯಪ್ ಮೂಲಕ ಆಸ್ತಿ ತೆರಿಗೆ ಕಟ್ಟುವ ವ್ಯವಸ್ಥೆ ಜಾರಿಯಾದರೆ, ಜನರ ಸಮಯ ಉಳಿಯುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ತಿಳಿಸಿದರು.
ಈಗಾಗಲೇ ಎಲ್ಲೆಡೆ ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಲಾಗುತ್ತಿದೆ. ಅಲ್ಲದೇ ಜಲ ಮಂಡಳಿ ಸೇರಿದಂತೆ ಹಲವು ಜನ ಬಳಕೆಯ ಶುಲ್ಕಗಳನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಅದೇ ವ್ಯವಸ್ಥೆಯನ್ನು ಆಸ್ತಿ ತೆರಿಗೆ ಪಾವತಿಗೆ ಬಳಸಿಕೊಳ್ಳಲು ಪಾಲಿಕೆ ಮುಂದಾಗಿದೆ ಎಂದರು.
ಇದರ ಲಾಭವನ್ನು ಅವಳಿ ನಗರದ 2 ಲಕ್ಷಕ್ಕೂ ಹೆಚ್ಚು ಜನರು ಪಡೆದುಕೊಳ್ಳಲಿದ್ದಾರೆ. ಆನ್‌ಲೈನ್ ಆಸ್ತಿ ತೆರಿಗೆ ಸಮಸ್ಯೆ ನಿವಾರಣೆಗೆ ಪಾಲಿಕೆ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ ರಚನೆ ಮಾಡಲಾಗುತ್ತಿದೆ. ಬಿಲ್ ಪಾವತಿಯಲ್ಲಾಗುವ ತೊಂದರೆ, ವಿವರಗಳ ಸಮಸ್ಯೆಗಳನ್ನು ಈ ಡೆಸ್ಕ್ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.
ತೆರಿಗೆ ಪಾವತಿಸುವ ಪ್ರತಿಯೊಬ್ಬರ ಬ್ಯಾಂಕ್ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ಸುರಕ್ಷಿತವಾಗಿರಲಿದೆ. ಈ ಪ್ರಕ್ರಿಯೆಯ ಎಲ್ಲಾ ಪ್ರಾಯೋಗಿಕ ಕಾರ್ಯಗಳು ಮುಗಿದಿದ್ದು, ಹಲವು ಬ್ಯಾಂಕ್‌ಗಳ ಜೊತೆ ಪಾಲಿಕೆ ಒಡಂಬಡಿಕೆ ಮಾಡಿಕೊಳ್ಳಲಿದೆ. ಅತೀ ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡುವ ಮೂಲಕ ಜನರಿಗೆ ಆ್ಯಪ್ ಬಳಕೆಗೆ ಮಹಾನಗರ ಪಾಲಿಕೆ ಮುಂದಾಗುತ್ತಿದೆ.