ಹುಬ್ಬಳ್ಳಿ: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬು.ತರ್ಲಘಟ್ಟ ಗ್ರಾಮ ಪಂಚಾಯತಿ ಆಶ್ರಯದಲ್ಲಿಂದು ಚಕ್ಕಡಿಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಚಿತ್ತಾಕರ್ಷಕವಾಗಿ ಅಲಂಕರಿಸಲ್ಪಟ್ಟಿದ್ದ ಚಕ್ಕಡಿಗಳು ಬು.ತರ್ಲಘಟ್ಟ, ಬು.ಕೊಪ್ಪ ಹಾಗೂ ನೆಲಗುಡ್ಡ ತ್ರಿವಳಿ ಗ್ರಾಮಗಳಲ್ಲಿ ಸಂಚರಿಸಿ ಬರುವ ಮೇ 19ರಂದು ನಡೆಯುವ ಕುಂದಗೋಳ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು ಎಂಬ ಆಶಯದೊಂದಿಗೆ ಸ್ವೀಪ್ ಕೇಕ್ನ್ನು ಗ್ರಾಮಸ್ಥರು ಕತ್ತರಿಸಿ ಹಂಚಿದರು.
ಶಿಕ್ಷಕರ ಕಲಾ ತಂಡ ಹಾಗೂ ಕಲ್ಮೇಶ್ವರ ಜಾಂಜ್ ಮೇಳದ ಕಲಾವಿದರಿಂದ ಚುನಾವಣಾ ಜಾಗೃತಿ ಗೀತೆಗಳನ್ನು ಹಾಡಲಾಯಿತು. ಗ್ರಾಮದ ಹಿರಿಯರಾದ ಎಸ್.ಜಿ.ತೆಂಬದಮನಿ, ಆರ್.ವಿ.ರಾಮನಗೌಡರ, ಜಿಲ್ಲಾ ಸ್ವೀಪ್ ಸಮಿತಿಯ ಕೆ.ಎಂ.ಶೇಖ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೀನಾಕ್ಷಿ ಭಜಂತ್ರಿ ಮತ್ತಿತರರು ಪಾಲ್ಗೊಂಡಿದ್ದರು.