ಹುಬ್ಬಳ್ಳಿ : ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಸಗಣಿ ಕುಳ್ಳು ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಂಸದ ಜಾಕೀರ್ ಸನದಿ ಮಾತನಾಡಿ, ಈ ಹಿಂದೆ ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಬಡವರು ಕಣ್ಣೀರು ಹಾಕಬಾರದು ಎಂದು ಗರೀಬಿ ಹಠಾವೋ ಎಂಬ ಯೋಜನೆ ತಂದು ಬೆಲೆ ಏರಿಕೆ ಬಿಸಿ ತಡೆಗಟ್ಟುವ ಕೆಲಸ ಮಾಡಿದರು. ಆದರೆ ಈಗಿನ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಒಲೆಯ ಹೊಗೆಯಿಂದ ಕಣ್ಣು ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂದು ಸಿಲಿಂಡರ್ ಗ್ಯಾಸ್ ಬಳಕೆ ಮಾಡಲು ತಿಳಿಸಿದರು. ಆದರೆ ಇದೀಗ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿ ಬಡವರಿಗೆ ಬರೆ ಹಾಕಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಏಕಾಏಕಿಯಾಗಿ ಸಿಲಿಂಡರ್ ಬೆಲೆ ಏರಿಕೆ ಮಾಡಿ ಅನಿಲ ವಿತರಕ ಕಂಪನಿಗಳ ಖಜಾನೆ ತುಂಬುವ ಕೆಲಸ ಮಾಡುತ್ತಿದೆ. ಸಿಎಎ, ಎನ್ಆರ್ಸಿ, ಎನ್ಪಿಆರ್ ಎಂದು ಜನರ ಗಮನ ಬೇರೆಡೆ ಸೆಳೆದು ಸಾರ್ವಜನಿಕರ ಲೂಟಿಗೆ ಇಳಿದಿದೆ ಎಂದು ಕಿಡಿಕಾರಿದರು.