ಹುಬ್ಬಳ್ಳಿ: ಕಿಮ್ಸ್ ವೇದಾಂತ ಕೋವಿಡ್ ಕೇರ್ ಸೆಂಟರ್ನಲ್ಲಿ ನಿನ್ನೆ (ಜ.17) ನರ್ಸಿಂಗ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಕೋವಿಡ್ ಸೋಂಕಿತ ಮಹಿಳೆ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಈ ಕುರಿತು ಸೂಕ್ತ ತನಿಖೆ ಮಾಡಿ 24 ಗಂಟೆಯೊಳಗೆ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇಂದು ಲಿಖಿತ ಸೂಚನೆ ನೀಡಿದ್ದಾರೆ ಎಂದು ಡಿಹೆಚ್ಒ ಬಸನಗೌಡ ಕರಿಗೌಡರು ಹೇಳಿದರು.
ನಗರದಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಬೆಡ್, ವೈದ್ಯಕೀಯ ಸೌಲಭ್ಯ, ಆಕ್ಸಿಜನ್, ಔಷಧಿಗಳ ಸಂಗ್ರಹ ಹಾಗು ವಿತರಣೆಗೆ ಕ್ರಮ ವಹಿಸಲಾಗಿದೆ. ಸೋಂಕಿತರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪೂರೈಸಲು ಯೋಜಿತ ರೀತಿಯಲ್ಲಿ ಕಾರ್ಯಗಳನ್ನು ಸಿದ್ಧಗೊಳಿಸಲಾಗಿದೆ.
ಆದರೆ, ನಿನ್ನೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಂಗಳಾ ಎಂಬ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ನಮಗೆ ವರದಿ ನೀಡಲು ಹೇಳಿದ್ದಾರೆ. ಈ ಬಗ್ಗೆ ನಾವು ಟಿಹೆಚ್ಒ ನೇತೃತ್ವದಲ್ಲಿ ಮೂವರ ತಂಡಮಾಡಿದ್ದೇವೆ. 24 ಗಂಟೆಯೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತೇವೆ. ಕೂಲಂಕಶ ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಎಂದರು.
ಇದನ್ನೂ ಓದಿ: ಕಿಮ್ಸ್‌ನಲ್ಲಿ ಚಿಕಿತ್ಸೆ ಸಿಗದೆ ಕೋವಿಡ್ ಸೋಂಕಿತೆ ಸಾವು ಆರೋಪ : ತಕ್ಷಣ ವರದಿ ಸಲ್ಲಿಕೆಗೆ ಡಿಹೆಚ್‍ಒಗೆ ಜಿಲ್ಲಾಧಿಕಾರಿ ಸೂಚನೆ