ಧಾರವಾಡ: ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಧಾರವಾಡದ ಯುವಕನೋರ್ವ ತನ್ನದೇ ಶೈಲಿಯಲ್ಲಿ ಕೋವಿಡ್ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ.
ಧಾರವಾಡದ ವಿಜೇತಕುಮಾರ್ ಹೊಸಮಠ ಎಂಬ ಯುವಕ ಬೈಕ್ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಹುಬ್ಬಳ್ಳಿಯ ಕೆಎಲ್ಇ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವ ವಿಜೇತ, ಕೊರೊನಾ ಜಾಗೃತಿ ಮೂಡಿಸಲು 100 ಸಿಸಿ ಬೈಕ್ನಲ್ಲಿ ಕಾಶ್ಮೀರದವರೆಗೆ ಪ್ರಯಾಣ ಕೈಗೊಂಡಿದ್ದಾರೆ.
20 ದಿನಗಳ ಕಾಲ ಈ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಸುಮಾರು 6000 ಕಿಲೋಮೀಟರ್ ಬೈಕ್ನಲ್ಲಿ ಸಂಚರಿಸಲಿದ್ದಾರೆ. ಅಕ್ಟೋಬರ್ 8 ರಂದು ಆರಂಭವಾಗಿರುವ ವಿಜೇತಕುಮಾರ್ ಪ್ರಯಾಣ ಇದೇ ತಿಂಗಳ 24 ಕ್ಕೆ ಅಂತ್ಯಗೊಳ್ಳಲಿದೆ. ನಿತ್ಯವೂ ದಾರಿಯುದ್ದಕ್ಕೂ ಹಳ್ಳಿ ಮತ್ತು ನಗರದ ಜನರಿಗೆ ಧಾರವಾಡದ ಈ ಯುವಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ವಿಜೇತಕುಮಾರ್, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಬೈಕ್ ಜಾಗೃತಿ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.