ಹುಬ್ಬಳ್ಳಿ: ಧಾರವಾಡದ ಬಾಡ ಗ್ರಾಮದ ಬಳಿ ನಡೆದ ಅಪಘಾತ ಪ್ರಕರಣ ಮನಕಲಕುವಂತದ್ದು, ತಾಯಿಯ ಮುಂದೆಯೇ ತಾಯಿಯ ತೊಡೆಗಳ ಮೇಲೆ ಕುಳಿತಿರುವ ಮಕ್ಕಳು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿದ್ದಾರೆ. ಅವರನ್ನು ನೋಡಿದಾಗ ಕರಳು ಚುರುಕ್ ಎನ್ನುವ ವಾತಾವರಣ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಪಘಾತ ಪ್ರಕರಣದ ಕರಾಳತೆಯನ್ನು ನೆನೆದರು.
ಧಾರವಾಡ ರಸ್ತೆ ಅಪಘಾತದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಆ ತಾಯಂದಿರ ಆಕ್ರಂದನ ಕೇಳಿದಾಗ ನಮಗೂ ಸಹಿತ ತಡೆದುಕೊಳ್ಳಲು ಆಗಲಾರದಷ್ಟು ನೋವಾಗಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಮರಳಿ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಹುದೊಡ್ಡ ಅಪಘಾತ ನಡೆದು 9 ಜನರು ತೀರಿಕೊಂಡಿದ್ದಾರೆ. 8 ಜನರು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಐಸಿಯುನಲ್ಲಿದ್ದಾರೆ. ಮನಕಲಕುವ ಘಟನೆ ನಡೆದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಸಂಪೂರ್ಣ ಚಿಕಿತ್ಸೆ ಉಚಿತವಾಗಬೇಕು. ಯಾವುದಕ್ಕೂ ಅವರಿಗೆ ತೊಂದರೆ ಆಗಬಾರದು. ಈಗಾಗಲೇ ಧಾರವಾಡ ಎಸ್ ಪಿ ಅವರು ಘಟನೆ ಕುರಿತು ಸಂದೇಶ ಕಳಿಸಿದ್ದರು. ಈ ಸಂಬಂಧ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮೃತರ ಕುಟುಂಬಸ್ಥರಿಗೆ ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮೂಲಕ ಆಗ್ರಹ ಮಾಡಿದ್ದೆ. ಅವರು ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುವೆ. ಉಳಿದಂತೆ ಕಾಳಜಿ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದರು.
ಇದನ್ನೂ ಓದಿ: ದಿಬ್ಬಣದ ವಾಹನ-ಕಾರು ಮಧ್ಯೆ ಡಿಕ್ಕಿ: ಕಾಂಗ್ರೆಸ್ ಘಟಕ ಅಧ್ಯಕ್ಷ ಸಾವು, 8ಕ್ಕೂ ಹೆಚ್ಚು ಮಂದಿಗೆ ಗಾಯ