ಧಾರವಾಡ: ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಸುರಿದ ಭಾರೀ ಮಳೆ ಬಹಳ ಅವಾಂತರ ಸೃಷ್ಟಿಸಿತ್ತು. ಒಂದೆಡೆ ಬೆಳೆದ ಬೆಳೆಗಳು ನೀರು ಪಾಲಾದ್ರೆ, ಇನ್ನೊಂದೆಡೆ ಹಲವರು ಮನೆ-ಮಠ ಕಳೆದುಕೊಂಡಿದ್ದರು. ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಆದರೆ ಪರಿಹಾರ ಅರ್ಹ ಫಲಾನುಭವಿಗಳಿಗೆ ತಲುಪದೇ ಉಳ್ಳವರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೇ ಸುರಿದ ಮಳೆಯಿಂದ ಹಲವರು ಮನೆ ಕಳೆದುಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಕೂಡ ಪರಿಹಾರ ತಲುಪಿಲ್ಲ. ಸರಿಯಾಗಿ ಫಲಾನುಭವಿಗಳನ್ನು ಆಯ್ಕೆ ಮಾಡದ ಕಾರಣ ಅರ್ಹ ಫಲಾನುಭವಿಗಳು ಪರಿಹಾರ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳು ಮಳೆಗೆ ನೆಲಕ್ಕುರುಳಿವೆ. ಆದರೆ ಯಾದವಾಡ ಗ್ರಾಮದಲ್ಲಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಇದುವರೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಅವರಿಗೆ ಬೇಕಾದವರಿಗೆ ಮಾತ್ರ ಮನೆ ಮಂಜೂರು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆ ಕಳೆದುಕೊಂಡವರಿಗೆ ಎ, ಬಿ, ಸಿ ಕೆಟಗೇರಿ ಮಾಡಿ ಪರಿಹಾರ ನೀಡುವಂತೆ ಸರ್ಕಾರ ಹೇಳಿತ್ತು. ಆದ್ರೆ ಅಧಿಕಾರಿಗಳು ಮನಬಂದಂತೆ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಿದ್ದಾರೆ. ಸರಿಯಾದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿಲ್ಲ. ಹೀಗಾದರೆ ಜೀವನ ಮಾಡುವುದು ಹೇಗೆ ಎಂದು ಮನೆ ಕಳೆದುಕೊಂಡವರು 'ಈಟಿವಿ ಭಾರತ'ದೊಂದಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ ಸಂತ್ರಸ್ತರು.
ಮನೆ ಹಂಚಿಕೆಯಲ್ಲಿ ಗೋಲ್ಮಾಲ್ ಮಾಡಿದ ಅಧಿಕಾರಿಗಳನ್ನು ಶಾಸಕರು ಧಾರವಾಡ ಸರ್ಕೀಟ್ ಹೌಸ್ಗೆ ಕರೆಸಿ ಅವಾಚ್ಯ ಪದಗಳಿಂದ ನಿಂದಿಸಿದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಶಾಸಕರ ಕ್ಷೇತ್ರದಲ್ಲಿ ಇದೀಗ ಮತ್ತೆ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.