ಧಾರವಾಡ : ಕೆಪಿಎಂಇ ನೋಂದಣಿ ಇಲ್ಲದ ಆಸ್ಪತ್ರೆಯೊಂದಕ್ಕೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದಲ್ಲಿ ಸಂಜಯ್ ಸಿಂಗ್ ಎಂಬುವವರು ಪೂನಮ್ ಪಾಲಿ ಕ್ಲಿನಿಕ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಸ್ತ್ರಚಿಕಿತ್ಸಕ, ಕಲಘಟಗಿ ನೋಡಲ್ ಅಧಿಕಾರಿ ಡಾ.ಬಸವರಾಜ ಬಾಸೂರ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಈ ವೇಳೆ ವೈದ್ಯ ಬಿಹೆಚ್ಎಂಎಸ್ ಪದವಿ ಹೊಂದಿರುವುದಾಗಿ ಹೇಳಿದರು. ಆದರೆ ಪ್ರಮಾಣ ಪತ್ರ ಹಾಜರು ಪಡಿಸಲಿಲ್ಲ. ಕೆಪಿಎಂಇ ಕಾಯ್ದೆಯಡಿ ನೋಂದಣಿಯನ್ನು ಹೊಂದಿರದ ಹಿನ್ನೆಲೆ ಆಸ್ಪತ್ರೆಗೆ ಬೀಗ ಹಾಕಲಾಯಿತು.
ಅನಾಧಿಕೃತ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಜಿಲ್ಲಾಡಳಿತದ ಸಹಾಯವಾಣಿ 1077 ಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.