ಹುಬ್ಬಳ್ಳಿ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ನಿರ್ಮಾಣ ಹಂತದ ಕಟ್ಟಡ ಕುಸಿತವೇ ಅಭ್ಯರ್ಥಿ ಆಯ್ಕೆಯ ಹೊಸ ಆಯಾಮಕ್ಕೆ ನಾಂದಿಯಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಧಾರವಾಡ ಕಟ್ಟಡ ದುರಂತ ಪ್ರಕರಣದಿಂದ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಸಂಭವನೀಯ ಪಟ್ಟಿಯಲ್ಲಿ ಹೆಸರು ಸೂಚನೆಗೊಂಡಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಟಿಕೆಟ್ ಕೈ ತಪ್ಪುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.
ಧಾರವಾಡದಲ್ಲಿ ನಿರ್ಮಾಣ ಹಂತ ಕಟ್ಟಡ ಕುಸಿತಗೊಂಡು ಹಲವಾರು ಸಾವು ನೋವು ಸಂಭವಿಸಿದೆ. ಈ ಕಟ್ಟಡ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಗಂಗಪ್ಪ ಶಿಂತ್ರಿ ಅವರಿಗೆ ಸೇರಿದ್ದು. ಈ ಹಿನ್ನೆಲೆಯಲ್ಲಿ ಕೈ ಪಕ್ಷದ ವರಿಷ್ಠರು ವಿನಯ್ ಕುಲಕರ್ಣಿಗೆ ಲೋಕಸಭಾ ಟಿಕೆಟ್ ವಿತರಣೆಯಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಭಾರಿಯ ಲೋಕಸಭೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕೈ ಬಿಡಬೇಕೆಂದು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿರುವುದು ಕಾಂಗ್ರೆಸ್ ಆಪ್ತ ವಲಯದಿಂದ ಕೇಳಿ ಬರುತ್ತಿದೆ.
ಕಳಪೆ ಕಾಮಗಾರಿಯಿಂದ 16ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಘಟನೆಯಿಂದ ವಿನಯ್ ಕುಲಕರ್ಣಿ ಇಮೇಜ್ಗೆ ಭಾರಿ ಡ್ಯಾಮೇಜ್ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಎಂಪಿ ಟಿಕೆಟ್ ಕೊಡದಿರಲು ಕೈ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಟಿಕೆಟ್ ಕೈ ತಪ್ಪುತ್ತಾ ಅನ್ನೊ ಅನುಮಾನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರದು.
ಮತ್ತೆ ಟಿಕೆಟ್ ಯಾರಿಗೆ:
ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಧಾರವಾಡದ ಕಟ್ಟಡ ದುರಂತದ ಬಳಿಕ ಮತ್ತೊಂದು ಸಂಚಲನ ಸೃಷ್ಟಿಯಾಗಿರುವುದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಸಂಭವನೀಯ ಪಟ್ಟಿಯಲ್ಲಿದ್ದ ಮಾಜಿ ಸಂಸದ ಐ.ಜಿ. ಸನದಿ ಪುತ್ರ ಶಾಖಿರ್ ಸನದಿ ಅಥವಾ ಕೆಎಸ್ಆರ್ಟಿಸಿಮಾಜಿ ಅಧ್ಯಕ್ಷ ಸದಾನಂದ ಡಂಗನವರ ಅವರಿಗೆ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.