ಹುಬ್ಬಳ್ಳಿ : ಬ್ರಿಟನ್ನಿಂದ ಬಂದವರು ಸುಳ್ಳು ಮಾಹಿತಿ ನೀಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಗ್ರಾಪಂ ಚುನಾವಣೆಯ ಮತ ಎಣಿಕೆ ಹಿನ್ನೆಲೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹೊಸ ರೂಪಾಂತರ ಕೊರೊನಾ ಆತಂಕ ಹಿನ್ನೆಲೆ ವಿದೇಶದಿಂದ ಬಂದ 37 ಜನರ ಪರೀಕ್ಷೆ ಆಗಿದೆ. 37 ಜನರಲ್ಲಿ ಓರ್ವ ಕಲಬುರಗಿ ಜಿಲ್ಲೆಗೆ ಹೋಗಿದ್ದು, ಅವರಿಗೆ ಮಾಹಿತಿ ನೀಡಿದ್ದೇವೆ.
ನಿನ್ನೆ ಮತ್ತೆ 10 ಜನ ಜಿಲ್ಲೆಗೆ ಬಂದಿದ್ದು, ಅವರನ್ನು ಪರೀಕ್ಷೆ ಮಾಡಲಾಗುತ್ತಿದೆ. ಅದರಲ್ಲಿ ಮೂವರು ಮಿಸ್ ಆಗಿದ್ದಾರೆ. ಅವರ ಪಾಸ್‌ಪೋರ್ಟ್ ಮಾಹಿತಿ ಪಡೆದು ಹುಡುಕಾಟ ನಡೆಸಿದ್ದೇವೆ.
ಏಳು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯುತ್ತಿದೆ. ಎಲ್ಲಾ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡಲಾಗುತ್ತಿದೆ. ಕಟ್ನೂರು, ಅಮರಗೋಳ ಚುನಾವಣೆ ಬಹಿಷ್ಕಾರವಾದ ಹಿನ್ನೆಲೆ ಮರು ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ.
ಯಾರಾದರೂ ಕೋವಿಡ್ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದಿನಂತೆ ರಾತ್ರಿ 11ಗಂಟೆಗೆ ಎಲ್ಲವೂ ಕ್ಲೋಸ್ ಆಗಬೇಕು. ಡಿಜೆ, ಸಾಮೂಹಿಕ ಪಾರ್ಟಿ ನಡೆಸುವಂತಿಲ್ಲ ಎಂದರು.
ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಲಾಬೂರಾಮ್, ಹೊಸ ವರ್ಷಕ್ಕೆ ರಾಜ್ಯ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹೋಟೆಲ್ ಮಾಲೀಕರಿಗೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.