ಧಾರವಾಡ: ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಕೋವಿಡ್-19 ರ ತಪಾಸಣೆಗೆ ಒಳಪಡಿಸಲು ಜಿಲ್ಲೆಯಾದ್ಯಂತ ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು ಮತ್ತು ಫಾರ್ಮಸಿಗಳಲ್ಲಿ ಕ್ರಮವಾಗಿ ಚಿಕಿತ್ಸೆಗೆ ಬರುವ ಮತ್ತು ಔಷಧಿ ಖರೀದಿಸುವವರಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಕೋವಿಡ್ ತಪಾಸಣೆಗೆ ಒಳಪಡಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಸದ್ಯ 17 ಮೂಗು ಮತ್ತು ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳು ಇದ್ದು, ಅವುಗಳನ್ನು 55ಕ್ಕೆ ಹೆಚ್ಚಿಸಬೇಕು. ಎಲ್ಲ ನಗರ ಮತ್ತು ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹಣಾ ಕೇಂದ್ರಗಳನ್ನು ಆರಂಭಿಸಬೇಕು. ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಆರೋಗ್ಯ ಸೇತು ಮೊಬೈಲ್ ಆ್ಯಪ್ ಮೂಲಕ ಸೋಂಕಿನ ಲಕ್ಷಣವಿರುವವರನ್ನು ಗುರುತಿಸಿ ತಪಾಸಣೆಗೆ ಬರಲು ಸೂಚಿಸಬೇಕು. ಅಂತಹ ವ್ಯಕ್ತಿಗಳು ತಪಾಸಣೆಗೆ ಬರದಿದ್ದರೆ, ಸ್ಥಳೀಯ ಆರೋಗ್ಯ ಇಲಾಖೆ, ಅಂಗನವಾಡಿ ಆಶಾ ಕಾರ್ಯಕರ್ತೆಯರ ಮೂಲಕ ಖುದ್ದು ಪರಿಶೀಲನೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್, ಅಪರ ಜಿಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.