ಹುಬ್ಬಳ್ಳಿ: ಮಹಾಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ವೀಕ್ಷಣೆ ನಡೆಸಿದರು. ಇಂದು ಗಾಮನಗಟ್ಟಿ ಗ್ರಾಮದಲ್ಲಿ ವೀಕ್ಷಣೆ ನಡೆಸಿದ ಅವರು, ಬಿ ವರ್ಗದ ಮನೆಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮೊದಲನೇ ಕಂತಿನ 1 ಲಕ್ಷ ರೂ. ಫಲಾನುಭವಿಗಳಿಗೆ ನೀಡಲಾಗಿದೆ ಎಂದರು. ಉಳಿದ ಬಾಕಿ ಹಣವನ್ನು ಮೂರು ಕಂತಿನಲ್ಲಿ ನೀಡಲಾಗುವುದು. ಗ್ರಾಮದಲ್ಲಿ ಬಿ ವರ್ಗದ 58 ಮನೆಗಳ ಪೈಕಿ, 20 ಮನೆಗಳ ಮನೆ ಕಟ್ಟುವ ಕಾರ್ಯ ಪ್ರಾರಂಭವಾಗಿವೆ ಎಂದರು.
ಇದೇ ವೇಳೆ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ, ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂತ್ರಸ್ತರಿಗೆ ಮನವಿ ಮಾಡಿದರು. ಹಾಗೂ ಸಂತ್ರಸ್ತರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸಂದೇಶ ಪತ್ರವನ್ನು ಸಹ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹು-ಧಾ ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.