ಹುಬ್ಬಳ್ಳಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಭಕ್ತರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಮ್ಮನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ಮೀಸಲಾತಿಯನ್ನು ವಾಮ ಮಾರ್ಗದಿಂದ ಪಡೆಯಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಅವರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದರೇ, ನಾನು ಬಹಿರಂಗ ಕ್ಷಮೆ ಕೋರುತ್ತೇನೆ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ ಸಿ ಪುಟ್ಟಸಿದ್ದಶೆಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟವು ಅತಿ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ, ಜನರ ಅಭಿವೃದ್ಧಿಗಿರುವ ಮೀಸಲಾತಿ ಸಂರಕ್ಷಣೆಗಾಗಿ ರಾಜ್ಯ ವ್ಯಾಪಿ ಹೋರಾಟ ಮಾಡಲಾಗುತ್ತಿದೆ. ಇದು ಯಾವುದೇ ಸಮಾಜದ ವಿರುದ್ಧವಲ್ಲ. ಆದರೆ ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಭಕ್ತರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕಾಯಕ ಸಮಾಜಕ್ಕಿರುವ ಶೇ.15 ರಷ್ಟು ಮೀಸಲಾತಿ ಉಳಿವಿಗಾಗಿ ಮಾತನಾಡಿದ್ದೇನೆ. ಅಂದು ನಾನು ಆಡಿದ ಮಾತುಗಳು ಪಂಚಮಸಾಲಿ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆ ಸಮಾಜದ ಧುರೀಣರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನನಗೆ ಮತ್ತು ನನ್ನ ಸ್ನೇಹಿತರಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ನಾವು ಅತಿ ಹಿಂದುಳಿದ ಸಮಾಜಗಳ ಜನರು. ನಮ್ಮ ಮೇಲೆ ತೋಳಬಲ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು : ಕೆ ಸಿ ಪುಟ್ಟಸಿದ್ಧಶೆಟ್ಟಿ
ಅ.15 ಕ್ಕೆ ಚಿಂತನ ಮಂಥನ ಸಭೆ: ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿ ಮತ್ತು ರಾಜಕಾರಣ ಕುರಿತು ನಾಳೆ ಹುಬ್ಬಳ್ಳಿಯ ಅಕ್ಕನ ಬಳಗದಲ್ಲಿ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಸಂವಿಧಾನ ತಜ್ಞರು ಈ ಕುರಿತು ವಿಸ್ತ್ರತವಾಗಿ ಚರ್ಚೆ ಮಾಡಲಿದ್ದಾರೆ. ಹೀಗಾಗಿ ನಾಳಿನ ಚಿಂತನ ಮಂಥನ ಸಭೆ ವಂಚಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಪಡೆಯಲು ನಡೆಸುತ್ತಿರುವ ಚಳುವಳಿಯ ಒಂದು ಭಾಗವಾಗಿದೆ ಎಂದು ಹೇಳಿದರು.