ಹುಬ್ಬಳ್ಳಿ: ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವನ್ನು ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರೆ ನೀಡಿದರು.
ಕಲಘಟಗಿ ಮತ್ತು ಅಳ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಪಟ್ಟಣದ ಎಪಿಎಂಸಿಯಿಂದ ಯುವಶಕ್ತಿ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಿ ಅವರು ಮಾತನಾಡಿದರು. ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ನಿರ್ಣಯಿಸುವ ಚುನಾವಣೆ ಆಗಿದೆ. ನಮ್ಮ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಅವರಿಗೆ ಮತ ನೀಡಿ ವಿಧಾನಸಭೆಗೆ ಕಳುಹಿಸಿ. ಇದರಿಂದ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಬಂದರೆ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಕೇಂದ್ರ ಸರ್ಕಾರ ನೀಡಿರುವ ಅನುದಾನ ಸಮರ್ಪಕವಾಗಿ ಬಳಸದೆ ಅದನ್ನು ದುರುಪಯೋಗ ಪಡಿಸಿಕೊಂಡರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಹೆಸರನ್ನು ನೋಂದಾಯಿಸಲು ಹೇಳಿದರೆ ಸರಿಯಾದ ಸಂಖ್ಯೆಯಲ್ಲಿ ಹೆಸರುಗಳನ್ನು ನೀಡಲಿಲ್ಲ. ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಆಡಳಿತಕ್ಕೆ ಬಂದ ನಂತರ ಒಟ್ಟು 54 ಲಕ್ಷ ಜನ ರೈತರ ಹೆಸರನ್ನು ನೊಂದಾಯಿಸಿದರು. ಇದು ನಮ್ಮ ಪಕ್ಷದ ನಾಯಕರು ಮಾಡುವ ಅದ್ಭುತ ಕಾರ್ಯಗಳು ಎಂದರು.
ಆಯುಷ್ಮಾನ ಭಾರತ ಯೋಜನೆ ಅಡಿಯಲ್ಲಿ ಬಡವರಿಗಾಗಿ ಪ್ರತಿ ವರ್ಷ ಐದು ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದು ಕಾಂಗ್ರೆಸ್ನಿಂದ ಅಸಾಧ್ಯವಾಗುತಿತ್ತು. ದಲಿತರಿಗೆ ಶೇ.2, ಆದಿವಾಸಿಗಳಿಗೆ ಶೇ.4 ಒಕ್ಕಲಿಗರಿಗೆ ಶೇ.2 ರಷ್ಟು ಹಾಗೂ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ ಕಾಂಗ್ರೆಸ್ನವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಯಡಿಯೂರಪ್ಪನವರು 170 ಕೇಸ್ಗಳನ್ನು ಮಾಡಿ 1700 ಜನರಿಗೆ ಜೈಲಿಗೆ ಕಳುಹಿಸಿದರು. ಆದರೆ ಸಿದ್ದರಾಮಯ್ಯ ಆಪಾದಿತರನ್ನು ಬಿಡುಗಡೆಗೋಳಿಸಿದರು. ನಂತರ ಮೋದಿ ಸರ್ಕಾರವು ಬಲಿಷ್ಠ ಆಧಾರ ಇಟ್ಟುಕೊಂಡು ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದರು. ಮಲಪ್ರಭಾದ ಯೋಜನೆ ಅಡಿಯಲ್ಲಿ 400 ಕೋಟಿ ರೂ. ಗಳ ಭ್ರಷ್ಟಾಚಾರ ಸಿದ್ದರಾಮಯ್ಯ ಅವರ ಆಡಳಿದಲ್ಲಿ ನಡೆದಿತ್ತು. ಶಿಕ್ಷಕರ ನೇಮಕಾತಿಯಲ್ಲಿ, ಪೊಲೀಸರ ನೇಮಕಾತಿ, ಅರ್ಕಾವತಿಯಲ್ಲಿ ಅನೇಕ ಭ್ರಷ್ಟಾಚಾರಗಳು ನಡೆದಿದ್ದವು ಎಂದು ಆರೋಪಿಸಿದರು.
ಇವೆಲ್ಲ ಸಮಸ್ಯೆ ಪರಿಹರಿಸಲಿಕ್ಕೆ ಕಲಘಟಗಿ ಜನರು ಕಮಲಕ್ಕೆ ಮತ ನೀಡಿ ನಾಗರಾಜ ಛಬ್ಬಿಯವರಿಗೆ ಬಹು ಮತಗಳಿಂದ ಗೆಲ್ಲಿಸಿ ಹಾಗೂ ಡಬಲ್ ಎಂಜಿನ್ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ವಿನಂತಿಸಿದರು. ರೋಡ್ ಶೋ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಭ್ಯರ್ಥಿ ನಾಗರಾಜ ಛಬ್ಬಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಎಚ್.ವಿಶ್ವನಾಥ್ ಗರಂ