ಹುಬ್ಬಳ್ಳಿ: ಕೊರೊನಾ ಮಹಾಮಾರಿಯ ಹೊಡೆತಕ್ಕೆ ಇಡೀ ಜಗತ್ತು ತತ್ತರಿಸಿಹೋಗಿದೆ. ಬಡ, ಮಧ್ಯಮ ವರ್ಗದ ಜನರು ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ಕುಟುಂಬದ ಮಹಿಳೆಯರನ್ನು ಗುರುತಿಸಿ ಅವರಿಗೆ ಕೆಲಸ ಕೊಡುವ ಮೂಲಕ ದೇಶಪಾಂಡೆ ಫೌಂಡೇಶನ್ ಸ್ವಾವಲಂಬಿಯಾಗಿಸುವ ಕಾರ್ಯ ಮಾಡುತ್ತಿದೆ.
ದೇಶಪಾಂಡೆ ಪ್ರತಿಷ್ಠಾನ ಆರಂಭದಿಂದಲೂ ಮಹಿಳೆಯರಿಗೆ ಬಟ್ಟೆ ಹೊಲಿಯುವುದು, ಕಸೂತಿ ಕೆಲಸ, ಎಂಬ್ರಾಯ್ಡರಿ ಕೆಲಸದಲ್ಲಿ ತರಬೇತಿ ನೀಡುತ್ತಿತ್ತು. ಅವರಿಗೆ ಸ್ವಯಂ ಉದ್ಯೋಗ ನೀಡಿ ಗ್ರಾಹಕರನ್ನು ಪರಿಚಯಿಸಿ ವಹಿವಾಟಿಗೆ ಅನುಕೂಲತೆ ಕಲ್ಪಿಸುತ್ತಿತ್ತು. ಆದರೆ ಲಾಕ್‌ಡೌನ್ ನಂತರ ಬಹುತೇಕ ಮಹಿಳೆಯರು ಕೆಲಸವಿಲ್ಲದೆ ಕಂಗೆಟ್ಟಿದ್ದರು. ಅಂತವರನ್ನು ಗುರುತಿಸಿ ಸಣ್ಣ ಉದ್ಯಮಿಗಳನ್ನಾಗಿ ಪರಿವರ್ತಿಸಿದೆ.
ಪ್ರತಿಯೊಬ್ಬ ಸಣ್ಣ ಉದ್ದಿಮೆದಾರ ಮಹಿಳೆ 20 ರಿಂದ25 ಜನರ ತಂಡವನ್ನು ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಖಾದಿ ಮಾಸ್ಕ್ ತಯಾರಿಕೆಯ ವಿಶೇಷ ತರಬೇತಿ ನೀಡಲಾಗಿದೆ. ಅವಳಿ ನಗರದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಹಿಳೆಯರು ಮಾಸ್ಕ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ಕುಟುಂಬ ನಿರ್ವಹಿಸಲು ಬೇಕಾದಷ್ಟು ಆದಾಯ ಗಳಿಸುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿ ಪಾಲನೆ: ಇದುವರೆಗೆ ಸುಮಾರು 50 ಸಾವಿರ ಮಾಸ್ಕ್‌ಗಳನ್ನು ಮಹಿಳೆಯರು ಸಿದ್ಧಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಯಂತೆ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ವಿವಿಧ ಹಂತಗಳಲ್ಲಿ ಮಾಸ್ಕ್‌ಗಳು ತಯಾರಾಗುತ್ತಿವೆ. ಉತ್ತಮ ಗುಣಮಟ್ಟದ ಕಾಟನ್ ಬಟ್ಟೆ ಬಳಸಿ ಖಾದಿ ಮಾಸ್ಕ್‌ಗಳನ್ನು ಹೊಲಿಯಲಾಗುತ್ತಿದೆ.
ಮೂರು ಲೇಯರ್‌ಗಳ ಮಾಸ್ಕ್‌ಗಳು ಬಲೂನ್ ಬ್ಲೋವಿಂಗ್ ಪ್ರಕ್ರಿಯೆಯಲ್ಲಿ ಪಾಸ್ ಆಗಿವೆ. ಮಹಿಳೆಯರು ಗ್ಲೌಸ್ ಧರಿಸಿ, ಮಾಸ್ಕ್ ಹಾಕಿಕೊಂಡು, ಕೈಗೆ ಸ್ಯಾನಿಟೈಸ್ ಬಳಸಿ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಾರೆ. ಹೊಲಿದು ಸಿದ್ಧಗೊಂಡ ಮಾಸ್ಕ್‌ಗಳನ್ನು ಗೋಕುಲ್ ರಸ್ತೆಯಲ್ಲಿರುವ ಸ್ಯಾಂಡ್‌ಬಾಕ್ಸ್ ಕಚೇರಿಗೆ ಕಳಿಸಲಾಗುತ್ತದೆ. ಅಲ್ಲಿ ಎರಡು ದಿನ ಡಿಸ್ ಇನ್‌ಫೆಕ್ಷನ್‌ಗೆ ಇರಿಸಿ ಸ್ಟೆರಿಲೈಜ್ ಮಾಡಲಾಗುತ್ತೆ. ನಂತರ ಪ್ಯಾಕ್ ಮಾಡಿ ಆರ್ಡರ್ ಬಂದೆಡೆ ಪೂರೈಸಲಾಗುತ್ತಿದೆ.
ಆರ್ಥಿಕವಾಗಿ ಸಬಲರಾದ ಮಹಿಳೆಯರು: ದೇಶಪಾಂಡೆ ಪ್ರತಿಷ್ಠಾನ ಖಾದಿ ಬಟ್ಟೆ, ಇಲಾಸ್ಟಿಕ್ ಹಾಗೂ ದಾರವನ್ನು ಪೂರೈಸುತ್ತೆ. ಖಾದಿ ಮಾಸ್ಕ್‌ಗಳು ಸಿದ್ಧವಾದ ನಂತರ ಗ್ರಾಹಕರನ್ನು ಗುರುತಿಸಿ ಮಾರಾಟ ಮಾಡಲಾಗುತ್ತೆ. ಮಹಿಳೆಯರಿಗೆ ಕಟಿಂಗ್, ಹೊಲಿಗೆ, ಸ್ಟೆರಲೈಜ್ ಪ್ರಕ್ರಿಯೆಗೆ ಇಂತಿಷ್ಟು ದರವನ್ನು ಕೊಡಲಾಗುತ್ತೆ. ಇದರಿಂದ ಸಖಿಯರು ಆರ್ಥಿಕವಾಗಿ ಸಬಲರಾಗಿದ್ದು, ಕುಟುಂಬಗಳನ್ನು ಮುನ್ನೆಡೆಸುತ್ತಿದ್ದಾರೆ.
ನಗರದ ವಿದ್ಯಾ ನಗರದಲ್ಲಿ ಸರ್ವಮಂಗಳ ಎಂಬುವರ ತಂಡ ಮಾಸ್ಕ್ ತಯಾರಿಕೆಯಲ್ಲಿ ಚುರುಕಿನಿಂದ ತೊಡಗಿಸಿಕೊಂಡಿದೆ. 10-15 ಜನರ ತಂಡ ಕಟ್ಟಿಕೊಂಡು ಮಾಸ್ಕ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಇದರಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತಿದೆ. ಲಾಕ್‌ಡೌನ್ ಸಂಕಷ್ಟದಲ್ಲಿ ಪರ್ಯಾಯ ಮಾರ್ಗ ಕಂಡುಕೊಂಡ ಮಹಿಳೆಯರು ಈಗ ಉತ್ತಮ ಆದಾಯ ಗಳಿಕೆ ಮಾಡುತ್ತಿದ್ದಾರೆ.
ದೇಶಪಾಂಡೆ ಪ್ರತಿಷ್ಠಾನದ ಡಾ. ಗುರುರಾಜ್ ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಪುಣ್ಯವತಿ ಗೌಳಿ ಮತ್ತು ರಾಜೇಶ್ವರಿ ಅವರು ಸಂಯೋಜಕರಾಗಿ ಸಾಕಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಮಹಿಳೆಯರನ್ನು ಸ್ವಾವಲಂಬಿಯಾಗಿಸುವದರ ಜೊತೆಗೆ ಸಣ್ಣ ಉದ್ಯಮಿಗಳನ್ನಾಗಿ ರೂಪಿಸುತ್ತಿದ್ದಾರೆ.