ಧಾರವಾಡ: ನನ್ನನ್ನು ಮಂತ್ರಿ ಮಾಡಿರಲಿಲ್ಲ, ನನಗೂ ಅಸಮಾಧಾನ ಇತ್ತು. ಹಿರಿಯ ರಾಜಕಾರಣಿ ಅಂತಾ ಇಡೀ ರಾಜ್ಯ ಹೇಳಿದ್ರೂ ಮಂತ್ರಿ ಮಾಡಲಿಲ್ಲ. ಸಭಾಪತಿ ಮಾಡಿದ್ರು, ಅದೂ ಹೋಯ್ತು. ಆದ್ರು ನಾನು ಅಸಮಾಧಾನ ಹೊರಗೆ ಹಾಕಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸ್ಥಾನದಲ್ಲಿ ಇದ್ದವನನ್ನು ಹೊರಗೆ ಹಾಕಿದರೆ ಏನಾಗಿರಬೇಡ ಹೇಳಿ. ಆದರೂ ನಾನು ಅಸಮಾಧಾನ ಹೊರ ಹಾಕಲಿಲ್ಲ. ಈ ಬಗ್ಗೆ ನಾವೆಲ್ಲ ಶಂಖ ಹೊಡಿತಾ ಇದಿವಾ ಎಂದು ಪ್ರಶ್ನಿಸಿದ್ರು. ನಾನು ರಾಜಕೀಯಕ್ಕೆ ಬಂದು 16 ಜನ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಇಂತಹ ಸ್ಥಿತಿ ನಾನು 38 ವರ್ಷದ ರಾಜಕಾರಣದಲ್ಲಿ ಒಮ್ಮೆಯೂ ನೋಡಿಲ್ಲ. ಸರ್ಕಾರ ಅಲ್ಲ ಇಡೀ ಡೆಮಾಕ್ರಸಿಯೇ ನಿಷ್ಕ್ರಿಯವಾಗಿದೆ ಎಂದು ಅಸಮಾಧಾನ ಹೊರಹಾಕಿದ್ರು.
ಸರ್ಕಾರ ಮಾಡೋಕೆ ಬಿಡಬೇಕಲ್ಲ, ಬಿಡ್ತಿಲ್ಲ. ಹತ್ತತ್ತು ಸಲ ಮಂತ್ರಿಯಾದವರು ಈಗ ಹೊಸಬರಿಗಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಬೇಕು. 15 ಜನ ರಾಜೀನಾಮೆ ಕೊಡುವವರೆಗೂ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.
ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವೇ ಗೊತ್ತಿಲ್ಲ. ಸಿಂಗ್, ಜಿಂದಾಲ್ ಕಾರಣ ಹೇಳಿದ್ದಾರೆ. ಅದಕ್ಕಾಗಿ ರಾಜೀನಾಮೆ ಕೊಡಬೇಕಾಗಿರಲಿಲ್ಲ. ಎಂಎಲ್‌ಎ ಆಗಿದ್ದುಕೊಂಡೇ ಹೋರಾಟ ಮಾಡಬಹುದಿತ್ತು. ಕುಮಟಳ್ಳಿಗೆ ರಮೇಶ್ ಅವರೇ ಟಿಕೆಟ್ ಕೊಡಿಸಿದ್ದಾರೆ. ಎಲೆಕ್ಷನ್ ನೋಡಿಕೊಂಡಿದ್ದಾರೆ. ಹೀಗಾಗಿ ಅವರು ಹೇಳಿದಂತೆ ಕೇಳುವೆ ಅಂದಿದ್ದಾರೆ. ಅವರು ಉಪಕಾರ ಮಾಡಿದವರನ್ನು ಸ್ಮರಿಸಿದ್ದಾರೆ. ಹೀಗಾಗಿ ಕುಮಟಳ್ಳಿಯನ್ನು ನಾವು ಪ್ರಶಂಸಿದ್ದೇವೆ ಎಂದರು.