ಧಾರವಾಡ: ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಿಯಾಗಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮುಚ್ಚುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಹಿಂದಿ ಪ್ರಚಾರ ಸಭಾ ಎದುರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕನಸೇ ಕಾರ್ಯಕರ್ತರು, ಹಿಂದಿ ಪ್ರಚಾರ ಸಭಾ ಕಚೇರಿವರೆಗೆ ಆಗಮಿಸಿ ಕೆಲಕಾಲ ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
2700 ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಈ ಭಾಷೆಯು ವಿಶ್ವ ಲಿಪಿಗಳ ರಾಣಿ. ಆದರೆ, ಕನ್ನಡ ಭಾಷಾ ಬೆಳವಣಿಗೆಗೆ ಹಿಂದಿ ಭಾಷೆ ಅಡ್ಡಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೇವಲ 200 ವರ್ಷಗಳ ಇತಿಹಾಸ ಹೊಂದಿರುವ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯ ಹೆಸರಲ್ಲಿ ಮೆರೆಸುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಕೇಂದ್ರ ಸರ್ಕಾರ ಭಾರತದ ಸಂವಿಧಾನ ಒಪ್ಪಿದ ಎಲ್ಲಾ 14 ಭಾಷೆ ಸಮಾನವಾಗಿ ಕಾಣದೆ, ಕೇವಲ ಹಿಂದಿ ಭಾಷಾ ಬೆಳವಣಿಗೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದು ನಾಚಿಗೇಡು ಎಂದು ಕಿಡಿಕಾರಿದರು.
ಕೂಡಲೇ ರಾಜ್ಯ ಸರ್ಕಾರ ಧಾರವಾಡದ ಹಿಂದಿ ಪ್ರಚಾರ ಸಭಾ ಮುಚ್ಚಬೇಕು. ಹಿಂದಿ ದಿನ ಆಚರಣೆ ಬದಲಿಗೆ ಕನ್ನಡ ಭಾಷಾ ದಿನ ಆಚರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.