ಕಲಘಟಗಿ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2018-19ನೇ ಸಾಲಿನ ಬೆಳೆ ವಿಮೆ ಹಣ ಮಂಜೂರಾಗಿಲ್ಲ. ಶೀಘ್ರ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಕಾಂಗ್ರೆಸ್ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಮಾತನಾಡಿ, ಎರಡು ವರ್ಷ ಕಳೆದರೂ ರೈತರಿಗೆ 2018-19ನೇ ಸಾಲಿನ ಬೆಳೆ ವಿಮೆ ಹಣ ಮಂಜೂರಾಗಿಲ್ಲ. ಹಾಗಾಗಿ
ಸರ್ಕಾರ ಶೀಘ್ರದಲ್ಲೇ ವಿಮೆ ಹಣವನ್ನು ಮಂಜೂರು ಮಾಡುವಂತೆ ಆಗ್ರಹಿಸಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಬೆಳೆ ವಿಮೆ ಹಣ ಬಂದರೆ ರೈತರಿಗೆ ಅನುಕೂಲವಾಗಲಿದೆ. ಬೆಳೆ ವಿಮೆ ಹಣ ಮಂಜೂರು ಆಗದಿದ್ದರೆ ಅಗಸ್ಟ್ 17 ರಂದು ತಹಶೀಲ್ದಾರ್ ಕಚೇರಿ ಎದುರು ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. ಲಿಂಗರಡ್ಡಿ ನಡುವಿನಮನಿ, ಚನ್ನಯ್ಯ ಬೂಕಟಗ್ಯಾರ, ಶಿವಪುತ್ರಪ್ಪ ಆಲದಕಟ್ಟಿ, ಕಲ್ಲಪ್ಪ ಅರಶಿಣಗೇರಿ, ಬೂದಪ್ಪ ಹುರಕಡ್ಲಿ ಹಾಗೂ ರೈತರು ಇದ್ದರು.