ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿ ರೈತರು ದಿಲ್ಲಿ ಚಲೋ ಚಳವಳಿ ನಡೆಸಿದರು.
ನಗರದ ಆಕ್ಸ್‌ಫರ್ಡ್ ಕಾಲೇಜಿನಿಂದ ಪಾದಯಾತ್ರೆ ನಡೆಸಿದ ರೈತರು ಕಿತ್ತೂರು ಚೆನ್ನಮ್ಮ ವೃತ್ತದ ಮೂಲಕ ರೈಲ್ವೆ ನಿಲ್ದಾಣದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು, ಗೋವಾ ಸರ್ಕಾರ ಯೋಜನೆ ಅನುಷ್ಠಾನಗೊಳಿಸಲು ಅಡ್ಡಗಾಲು ಹಾಕುವ ಮೂಲಕ ಪರಿಸರದ ನೆಪವೊಡ್ಡಿ ರಾಜ್ಯದ ಪಾಲಿನ ನೀರನ್ನು ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಮಹದಾಯಿ ನ್ಯಾಯಾಧಿಕರಣವು ತೀರ್ಪು ನೀಡಿದ್ದು, ಈ ಮೂಲಕ ರಾಜ್ಯದ ಪಾಲಿನ ನೀರಿನ ಬಳಕೆಗೆ ಸಂಪೂರ್ಣ ಅನುಮತಿ ನೀಡಿದ್ದರೂ ನ್ಯಾಯಾಧಿಕರಣದ ತೀರ್ಪುನ್ನು ಉಲ್ಲಂಘಿಸುವ ಮೂಲಕ ಈ ಭಾಗದ ಕುಡಿಯುವ ನೀರಿನ ಯೋಜನೆಗೆ ಅಡ್ಡಗಾಲನ್ನು ಹಾಕುತ್ತಿದ್ದು, ಕೂಡಲೇ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ದಿಲ್ಲಿ ಚಲೋ ಕೈಗೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಈ ಚಳವಳಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಗೊಳಿಸಲು ಒತ್ತಾಯಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಸುಭಾಸಚಂದ್ರಗೌಡ, ಹೇಮನಗೌಡ ಬಸನಗೌಡ್ರ ಸೇರಿದಂತೆ ಪಕ್ಷಾತೀತ ರೈತ ಹೋರಾಟ ಸಮಿತಿಯ ನೂರಾರು ಸದಸ್ಯರು ಇದ್ದರು.