ಹುಬ್ಬಳ್ಳಿ: ನಗರದ ವಾರ್ಡ್ ನಂ.35 ರಲ್ಲಿ ಬರುವ ರಾಮಲಿಂಗೇಶ್ವರ ನಗರದ ನಿವಾಸಿಯಾದ ವಿದ್ಯಾ ಮಂಜುನಾಥ ಜರತಾರಘರ ಎಂಬುವರು ಮನೆಯೊಂದನ್ನು ಖರೀದಿಸಿದ್ದರು. ಅದರಂತೆ ಆಸ್ತಿ ತೆರಿಗೆಯಲ್ಲಿ ಹೆಸರು ವರ್ಗಾವಣೆಗೆ 2017ರಲ್ಲಿ ಪಾಲಿಕೆಯ ವಲಯ ಕಚೇರಿ 7ರಲ್ಲಿ ಅರ್ಜಿ ಕೊಟ್ಟಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಸಹ ಇದುವರೆಗೂ ಹೆಸರು ವರ್ಗಾವಣೆ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ಲಾಟ್ ನಂ.963 ಪಿಐಡಿ ಸ್ವತ್ತಿನ ಗುರುತಿನ ಸಂಖ್ಯೆ 35/4230ದ ಅನುಭೋಗಸ್ತರಾದ ಸುಮನಾ ಸುರೇಶ ಪೂಜಾರಿ ಅವರಿಂದ ವಿದ್ಯಾ ಅವರು ಮನೆ ಖರೀದಿ ಮಾಡಿದ್ದರಂತೆ. ಆಸ್ತಿ ತೆರಿಗೆ ವರ್ಗಾವಣೆ ಶುಲ್ಕವನ್ನು ಭರಿಸಿ, ಅಗತ್ಯ ದಾಖಲೆ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕಳೆದ ವರ್ಷ ಸುರಿದ ಮಳೆಗೆ ಮನೆ ಕುಸಿದಿದ್ದು, ನನಗೆ ಹೊಸ ಮನೆ ಕಟ್ಟಲು ಸಾಧ್ಯವಾಗಿಲ್ಲ. ಇದೇ ನೆಪದಲ್ಲಿ ಅಧಿಕಾರಿಗಳು ವರ್ಗಾವಣೆ ಸಾಧ್ಯವಿಲ್ಲ ಹಾಗೂ ಆಸ್ತಿಯಲ್ಲಿ ನಿಮ್ಮ ಹೆಸರು ರದ್ದು ಮಾಡಿದ್ದೇವೆ ಎಂದು ನೋಟಿಸ್ ನೀಡಿದ್ದಾರೆ ಎಂದು ಅಸಹಾಯಕ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಸಕಾಲದಲ್ಲಿ ಕೆಲಸ ಮಾಡಿಕೊಡದ ಅಧಿಕಾರಿಗಳು, ಈಗ ಪಿಐಡಿ ರದ್ದುಪಡಿಸಿರುವುದು ಬಹಳ ನೋವುಂಟುಮಾಡಿದೆ. ಮನೆ ಕಟ್ಟಲು ಕಾಲಾವಕಾಶ ನೀಡಿ, ನನಗೆ ಆಸ್ತಿ ಹಕ್ಕು ನೀಡಬೇಕು. ಇಲ್ಲದಿದ್ದರೆ, ಈ ಕುರಿತು ನ್ಯಾಯಾಲಯದ ಮೊರೆ ಹೋಗಲಿದ್ದೇನೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನೊಂದ ಮಹಿಳೆ ಎಚ್ಚರಿಕೆ ನೀಡಿದ್ದಾರೆ.