ಹುಬ್ಬಳ್ಳಿ: ಕೊರೊನಾಗೆ ಜನರು ಬೆಚ್ಚಿಬಿದ್ದಿದ್ದಾರೆ. ಆಸ್ಪತ್ರೆಗೆ ಹೋದರೆ ಮರಳಿ ಮನೆಗೆ ಬರುತ್ತೇವೋ, ಇಲ್ಲವೋ ಎನ್ನುವ ಭಯ ಶುರುವಾಗಿದೆ. ಈ ಆತಂಕಕ್ಕೆ ಕಾರಣವಾಗಿದ್ದು, ಪ್ರತಿನಿತ್ಯ ಆ ಆಸ್ಪತ್ರೆಯಲ್ಲಿ 7 ರಿಂದ 8 ಜನ ಬಲಿಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲೇ ಅತೀ ಹೆಚ್ಚು ಸಾವು ಸಂಭವಿಸುತ್ತಿರುವುದಕ್ಕೆ ಸಾರ್ವಜನಿಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂಬ ಬಿರುದಾಂಕಿತ ಪಡೆದಿದೆ. ಉತ್ತರ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆ ಎಂಬೆಲ್ಲ ಕೀರ್ತಿ ಇದಕ್ಕಿದೆ. ಆದರೆ ಈ ಆಸ್ಪತ್ರೆಗೆ ಕೋವಿಡ್ನಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರಿಗೆ ಭಯ ಆರಂಭವಾಗಿದೆ. ಕೋವಿಡ್ ಸೋಂಕಿಗೆ ಪ್ರತಿನಿತ್ಯ 7 ರಿಂದ 8 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಬಲಿಯಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 200ರ ಗಡಿ ಹತ್ತಿರ ತಲುಪಿದ್ದು, ಈವರೆಗೆ 193 ಜನರು ಸಾವನ್ನಪ್ಪಿದ್ದಾರೆ. ಧಾರವಾಡದಲ್ಲಿ ದಿನವೊಂದಕ್ಕೆ 200ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೇವಲ 345 ಜನರಿಗೆ ಕೊರೊನಾ ಅಂಟಿತ್ತು. ಅಲ್ಲದೆ ಈ ವೈರಸ್ನಿಂದ 8 ಜನ ಜೀವ ಕಳೆದುಕೊಂಡಿದ್ದರು. ಆದರೆ ಕೇವಲ ಜುಲೈ ತಿಂಗಳೊಂದರಲ್ಲೇ ಬರೋಬ್ಬರಿ 148 ಜನ ಬಲಿಯಾಗಿದ್ದು, ಸಹಜವಾಗೇ ಇಲ್ಲಿನ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.
ಪ್ರತಿದಿನವೂ ಜಿಲ್ಲೆಯಲ್ಲಿ ಸರಾಸರಿ 8 ಜನ ಅಸುನೀಗುತ್ತಿದ್ದಾರೆ. ಹೀಗಾಗಿ ಇದು ಜಿಲ್ಲಾಡಳಿತಕ್ಕೂ ಕೂಡಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ರಾಜ್ಯದಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾವು ಸಂಭವಿಸುತ್ತಿರೋದು ಬೆಂಗಳೂರು, ಮೈಸೂರು, ದಕ್ಷಿಣಕನ್ನಡ ಬಿಟ್ಟರೆ ಧಾರವಾಡ ಜಿಲ್ಲೆಯಲ್ಲೇ ಎಂಬುದು ಆಡಳಿತಕ್ಕೆ ತಲೆನೋವಾಗಿದೆ.
ಮೊದಲು ಕೋವಿಡ್ ಕಾಣಿಸಿಕೊಂಡ ಕಲಬುರಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೆ ಧಾರವಾಡದಲ್ಲಿ ಕೋವಿಡ್ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ 129 ಜನರು ಬಿಟ್ಟರೆ ಮತ್ಯಾವ ಜಿಲ್ಲೆಯಲ್ಲಿಯೂ ಸಾವಿನ ಸಂಖ್ಯೆ 100ರ ಗಡಿ ದಾಟಿಲ್ಲ. ಆದರೆ ಅತಿ ಹೆಚ್ಚು ಜನರು ಇಲ್ಲಿವರೆಗೆ ಬಲಿಯಾಗಿದ್ದು ಮಾತ್ರ ಧಾರವಾಡ ಜಿಲ್ಲೆಯಲ್ಲಿ. ಬರೋಬ್ಬರಿ 193 ಜನರು ಸಾವನ್ನಪ್ಪಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ದಿನದಿಂದ ದಿನಕ್ಕೆ ಭಯ ಹುಟ್ಟಿಸುತ್ತಿದೆ. ಇಂದು 8 ಜನ, ನಾಳೆ ಮತ್ತೆಷ್ಟು ಜನರು ಕೋವಿಡ್ಗೆ ಬಲಿಯಾಗುತ್ತಾರೆ ಎನ್ನುವ ಆತಂಕ ಎಲ್ಲರಲ್ಲಿಯೂ ಮೆನಮಾಡಿದೆ. ಗುಣಮಟ್ಟದ ಚಿಕಿತ್ಸೆ ನೀಡಿ ಕೋವಿಡ್ಗೆ ಬಲಿಯಾಗುತ್ತಿರುವುದಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮುಂದಾಗಬೇಕಿದೆ.