ಹುಬ್ಬಳ್ಳಿ: ರಾಷ್ಟ್ರೀಯ ನಾಯಕರು ವಿಧಾನ ಪರಿಷತ್ ಸ್ಥಾನಕ್ಕೆ ನನ್ನ ಹೆಸರನ್ನು ಅಂತಿಮಗೊಳಿಸಿದ್ದಾರೆ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಬಿಎಸ್ವೈ ಅವರನ್ನು ಭೇಟಿಯಾಗಿ ನಾಮಪತ್ರ ಸಲ್ಲಿಕೆ ಬಗ್ಗೆ ಚರ್ಚಿಸುವುದಾಗಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹೆಚ್ ವಿಶ್ವನಾಥ್ ಅವರನ್ನು ಸಚಿವರಾಗಿ ಮಾಡುವ ಚಿಂತನೆಯಿದೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡ್ತಾರೆ. ಹಾಗೂ ಆರ್. ಶಂಕರ್ ಸಹ ಸಚಿವರನ್ನಾಗಿ ಮಾಡ್ತಲಾಗುತ್ತೆ ಎಂದರು.
ಜೂನ್ ತಿಂಗಳಲ್ಲಿ ನಾಲ್ಕು ಪರಿಷತ್ ಸ್ಥಾನಗಳು ಖಾಲಿಯಾಗಲಿವೆ. ಆಗ ಎಲ್ಲರಿಗೂ ಅವಕಾಶ ಸಿಗಲಿದೆ. ನಮ್ಮಲ್ಲಿ ಹೊಸಬರು ಹಾಗೂ ಹಳಬರು ಎಂಬುವ ಪಶ್ನೆ ಇಲ್ಲ. ಸೋತವರಿಗೂ ಉನ್ನತ ಸ್ಥಾನಮಾನ ಸಿಗಲಿದೆ. ನಾನು ಯಾವುದೇ ಮನೆ ಸದಸ್ಯ ಅಲ್ಲದಿದ್ದರೂ ಸಹ ಹೈಕಮಾಂಡ್ ನನಗೆ ಡಿಸಿಎಂ ಸ್ಥಾನ ನೀಡಿದ್ರು. ಅವಾಗಲೆ ನಾನು ಮುಂದುವರೆಯುತ್ತೇನೆ ಅಂತ ಗೊತ್ತಿತ್ತು. ಸದ್ಯ ಎಲ್ಲದಕ್ಕೂ ತೆರೆ ಬಿದ್ದಿದೆ. ಇಷ್ಟು ದಿನ ಅನವಶ್ಯಕ ಚರ್ಚೆಗಳು ಆಗಿದ್ದವು ಎಂದು ಸವದಿ ಹೇಳಿದ್ರು.
ಆರ್. ಶಂಕರ್ ಅವರು ಕೂಡಾ ಜೂನ್ನಲ್ಲಿ ಪರಿಷತ್ಗೆ ಸ್ಪರ್ಧಿಸುತ್ತಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪನವರೇ ಹೇಳಿದ್ದಾರೆ ಎಂದರು. ಸೋತವರಿಗೆ ಡಿಸಿಎಂ ಹುದ್ದೆ ನೀಡಿದ್ದಾರೆ, ನನಗ್ಯಾಕೆ ನೀಡೋದಿಲ್ಲ ಅನ್ನೋ ಹೆಚ್. ವಿಶ್ವನಾಥ ಹೇಳಿಕೆ ವಿಚಾರ ಮಾತನಾಡಿ, ಅವರಿಗೂ ಮುಂದಿನ ದಿನದಲ್ಲಿ ಶುಕ್ರದೆಸೆ ಕಾದಿದೆ. ತಾಳ್ಮೆಯಿಂದ ಇರಲಿ, ಅವರಿಗೂ ಅವಕಾಶ ಸಿಗುತ್ತೆ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.
ಬಳಿಕ ಮತ್ತೋರ್ವ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಸಂಪುಟ ವಿಸ್ತರಣೆಯ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಈಗಾಗಲೇ ದಿನಾಂಕ ಘೋಷಣೆ ಮಾಡಿದ್ದಾರೆ. 10+3 ಸೂತ್ರದ ಅನ್ವಯ ಸಂಪುಟ ವಿಸ್ತರಣೆಯಾಗುತ್ತೆ. ಆದ್ರೆ ಯಾರಾರನ್ನು ಸಚಿವತರನ್ನಾಗಿ ಮಾಡಬೇಕು ಅನ್ನೋದನ್ನು ಸಿಎಂ ಹಾಗೂ ವರಿಷ್ಠರು ನಿರ್ಧಾರ ಮಾಡ್ತಾರೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಬೈ ಎಲೆಕ್ಷನ್ನಲ್ಲಿ ಸೋತಿರುವವರ ಬಗ್ಗೆ ಸಿಎಂ ಗಮನ ಕೊಡ್ತಾರೆ ಎಂದು ತಿಳಿಸಿದರು.