ಧಾರವಾಡ: ಹುಬ್ಬಳ್ಳಿಯಲ್ಲಿ ಇಂದು ಮತ್ತೋರ್ವ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಸಹಾಯವಾಣಿಗೆ ಕರೆ ಮಾಡಿ ತಮ್ಮ ವಿವರ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ಶಹರದ 44ನೇ ವಾರ್ಡ್ ವ್ಯಾಪ್ತಿಯ ಕರಾಡಿ ಓಣಿಯ ಕಮರಿಪೇಟೆ ನಿವಾಸಿ ಒಬ್ಬರಲ್ಲಿ ಕೋವಿಡ್ 19 ಇರುವುದು ಪತ್ತೆಯಾಗಿದೆ. ಈತ ಸ್ಮಶಾನ ಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಪಿ236 ಎಂದು ಹೆಸರಿಸಲಾಗಿದೆ. ಈತ, ಇತರರ ಜೊತೆಗೂಡಿ ಮಾರ್ಚ್ 27ರಂದು ಮುಲ್ಲಾ ಓಣಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿ ವ್ಯಾಪ್ತಿಯ ಕಮರಿಪೇಟೆ ಹಾಗೂ ಆನಂದ ನಗರದ ಸಾರ್ವಜನಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಿದ್ದ ಎಂದು ತಿಳಿದುಬಂದಿದೆ.
ಸೋಂಕಿತರಿಂದ ಆಹಾರ ಪಡೆದು, ಆತನ ಜೊತೆ ಸಂಪರ್ಕದಲ್ಲಿ ಇದ್ದವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಕೂಡಲೇ ಅವರೆಲ್ಲಾ ಕೊರೊನಾ ಸಹಾಯವಾಣಿ 1077 ಸಂಖ್ಯೆಗೆ ಕರೆ ಮಾಡಿ ತಮ್ಮ ವಿವರ ಹಂಚಿಕೊಳ್ಳಬೇಕು. ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.