ಧಾರವಾಡ: ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನು ಹಾಗೂ ಕಳ್ಳಭಟ್ಟಿ ಸಾರಾಯಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾದೆ. ಅಬಕಾರಿ ಹಾಗೂ ಕಳ್ಳಭಟ್ಟಿ ಕಾರ್ಯನಿರತರಿಗೆ ಶಿಕ್ಷಣ, ಉದ್ಯೋಗ ನೀಡಿ ಪುನರ್ ವಸತಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಬಕಾರಿ ಅಕ್ರಮ ಮತ್ತು ಕಳ್ಳಭಟ್ಟಿ ಸಾರಾಯಿ ಕೇಂದ್ರಗಳ ನಿರ್ಮೂಲನೆಗೆ ರಚಿತವಾಗಿರುವ ಜಿಲ್ಲಾ ಮಟ್ಟದ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2007-08 ರಿಂದ ವಿವಿಧ ತಾಲೂಕುಗಳಲ್ಲಿ ಸುಮಾರು 29 ಕಳ್ಳಭಟ್ಟಿ ಸಾರಾಯಿ ಕೇಂದ್ರಗಳಿದ್ದು, ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ನಿರಂತರ ದಾಳಿ ಹಾಗೂ ಗಸ್ತು, ಪರಿಶೀಲನೆಗಳಿಂದ 27 ಕ್ಕೂ ಹೆಚ್ಚು ಕಳ್ಳಭಟ್ಟಿ ಕೇಂದ್ರಗಳು ಸಂಪೂರ್ಣ ನಿರ್ಮೂಲನೆಯಾಗಿವೆ. ಅಣ್ಣಿಗೇರಿ ಮತ್ತು ತಡಸಿನಕೊಪ್ಪದಲ್ಲಿ ಮಾತ್ರ ಕಳ್ಳಭಟ್ಟಿ ಕೇಂದ್ರಗಳು ಕಂಡು ಬರುತ್ತಿದ್ದು, ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದರು.
ಅಬಕಾರಿ ಅಕ್ರಮ ಹಾಗೂ ಕಳ್ಳಭಟ್ಟಿ ಕೇಂದ್ರಗಳಿರುವ ಪ್ರದೇಶದಲ್ಲಿನ ಕುಟುಂಬ ವಿವರಗಳನ್ನು ಸಂಗ್ರಹಿಸಿ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವಿವಿಧ ನಿಗಮ, ಮಂಡಳಿಗಳಲ್ಲಿ ಉದ್ಯೋಗ ಹಾಗೂ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ ಆರ್ಥಿಕ ನೇರವು ನೀಡಿ ಅವರಿಗೆ ಪುನರ್‍ವಸತಿ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಶಿವನಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 284.42 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿದೆ. ಜಿಲ್ಲೆಯಲ್ಲಿ 276 ವಿವಿಧ ಪ್ರಕಾರದ ಮದ್ಯ ಮಾರಾಟ ಸನ್ನದುಗಳಿವೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಸಭೆಗೆ ತಿಳಿಸಿದರು.
ಆಗಸ್ಟ್-2019 ರಲ್ಲಿ ವಿಚಕ್ಷಣೆಯಲ್ಲಿದ್ದ ಧಾರವಾಡ ತಾಲೂಕಿನಲ್ಲಿ ಜೈ ಭಾರತ ಕಾಲೋನಿ, ಜೋಗೆಲ್ಲಾಪೂರ ಮತ್ತು ಕಲಘಟಗಿ ತಾಲೂಕಿನ ಶಿಗಿಗಟ್ಟಿ ತಾಂಡಾಗಳಲ್ಲಿದ್ದ ಕಳ್ಳಭಟ್ಟಿ ಕೇಂದ್ರಗಳಲ್ಲಿನ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದ್ದು, ಈಗ ವಿಚಕ್ಷಣ ಪಟ್ಟಿಯಿಂದ ಅವುಗಳನ್ನು ಕೈಬಿಡಲಾಗಿದೆ. 2018-19 ರಿಂದ 2020-21 ರ ಆಗಸ್ಟ್ ತಿಂಗಳವರೆಗೆ ಅಬಕಾರಿ ಇಲಾಖೆಯಿಂದ ಕಳ್ಳಭಟ್ಟಿ ನಿರ್ಮೂಲನೆಗಾಗಿ 205 ಘೋರ ಪ್ರಕರಣಗಳು, 14 ಕಳ್ಳಭಟ್ಟಿ ಸಂಬಂಧಿತ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 41,200 ಲೀಟರ್ ಕಳ್ಳಭಟ್ಟಿ, 2712 ಲೀಟರ್ ಬೆಲ್ಲದ ಕೊಳೆ ಹಾಗೂ 5 ಕೆಜಿ ಬೆಲ್ಲ ವಶ ಪಡಿಸಿಕೊಂಡು ನಾಶ ಪಡಿಸಲಾಗಿದೆ ಎಂದರು.
ಆರು ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಸತತ ಪ್ರಯತ್ನ, ನಿರಂತರ ದಾಳಿ ಹಾಗೂ ಗಸ್ತು ಕಾರ್ಯಗಳಿಂದಾಗಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ 26 ಕಳ್ಳಭಟ್ಟಿ ಕೇಂದ್ರಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ ಎಂದು ತಿಳಿಸಿದರು.