ಹುಬ್ಬಳ್ಳಿ: ಅವಳಿ ನಗರದಲ್ಲಿ ಪ್ರತಿದಿನ ಒಂದಿಲ್ಲೊಂದು ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತೆ. ಹಾಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಚಟುವಟಿಕೆ, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಆದರೆ ಕೋಟಿ ಕೋಟಿ ಖರ್ಚು ಮಾಡಿ ಅಳವಡಿಸಿದ ನೂರಾರು ಸಿಸಿ ಕ್ಯಾಮೆರಾಗಳು ಇದೀಗ ಕಣ್ಣಿದ್ದು ಕುರುಡಾಗಿವೆ.
ಹುಬ್ಬಳ್ಳಿ- ಧಾರವಾಡ ಮಹಾನಗರದ ವಿವಿಧ ಬಡಾವಣೆ, ಪ್ರಮುಖ ವೃತ್ತಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಬರೋಬ್ಬರಿ 474 ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಆದ್ರೆ 474 ಸಿಸಿ ಕ್ಯಾಮೆರಾಗಳ ಪೈಕಿ ಇದೀಗ 188 ಕ್ಯಾಮರಾಗಳು ಸುಸ್ಥಿತಿಯಲ್ಲಿವೆ. ಇನ್ನುಳಿದಂತೆ ಪೊಲೀಸ್ ಇಲಾಖೆ 74 ಕ್ಯಾಮರಾಗಳನ್ನ ಅಳವಡಿಸಿದ್ದು, ಇದರಲ್ಲಿ 72 ಕ್ಯಾಮರಾಗಳು ಕೆಲಸ ಮಾಡಿತ್ತಿವೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಹಾನಗರದ ವಿವಿಧೆಡೆ ಅಳವಡಿಸಿರುವ ನೂರಾರು ಕ್ಯಾಮರಾಗಳು ನಿರ್ವಹಣೆ ಇಲ್ಲದೇ ಕೆಟ್ಟುಹೋಗಿವೆ.
ಹನಿಟ್ರ್ಯಾಪ್ ಪ್ರಕರಣ: ’ಮಹಾ’ ಮೂಲದ ಬಿಎಸ್ಎಫ್ ಯೋಧನ ಬಂಧಿಸಿದ ಪಂಜಾಬ್ ಪೊಲೀಸ್
ಪೊಲೀಸ್ ಇಲಾಖೆ ಅಪರಾಧ ಕೃತ್ಯಗಳು ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿನ ನೂರಾರು ಕ್ಯಾಮರಾಗಳನ್ನ ರಿಪೇರಿ ಮಾಡಿಸುವಂತೆ ಮನವಿ ಮಾಡಿದ್ರು, ಪಾಲಿಕೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಪೊಲೀಸರು ಮಹಾನಗರದಲ್ಲಿ ನಡೆಯೋ ಸರಗಳ್ಳತನ, ಬೈಕ್ ಕಳ್ಳತನ, ಕೊಲೆ ಅಪಘಾತ ಪ್ರಕರಣಗಳನ್ನ ತಡೆಗಟ್ಟಲು ವಿಫಲವಾಗಿತ್ತಿದೆ. ಅಲ್ಲದೇ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಮಧ್ಯದ ಸಮನ್ವಯ ಕೊರತೆಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿದ ಕ್ಯಾಮರಾಗಳು ಕೆಟ್ಟು ಹಾಳಾಗುತ್ತಿರುವುದರಿಂದ ಸರ್ಕಾರದ ಹಣ ಪೊಲಾಗುತ್ತಿದೆ.
ಮಹಾನಗರ ಪಾಲಿಕೆ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡುವ ವೇಳೆ ತೋರಿದ ಉತ್ಸಾಹ ಇದೀಗ ನಿರ್ವಹಣೆ ಮಾಡುವಲ್ಲಿ ತೋರಿಸುತ್ತಿಲ್ಲ. ಅಲ್ಲದೇ ಸಿಸಿ ಕ್ಯಾಮರಾಗಳ ಅಳವಡಿಕೆಯಲ್ಲಿ ಅಕ್ರಮ ಸಹ ನಡೆದಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.