ಹುಬ್ಬಳ್ಳಿ: ಮಣ್ಣಿನಲ್ಲೇ ರೈತಾಪಿ ಜನರ ಬದುಕು. ಅದೇ ಮಣ್ಣಿನಿಂದ ತಯಾರಾಗುವ ಬೊಂಬೆಗಳು ಭವಿಷ್ಯ ಹೇಳ್ತವೆ ಅಂದ್ರೇ ಅಚ್ಚರಿ ಅಲ್ವೇ.. ಅಂತ ಒಂದು ಅಚ್ಚರಿಗೆ ಕಾರಣವಾಗ್ತಿದೆ ಧಾರವಾಡ ಜಿಲ್ಲೆಯೊಂದರ ಪುಟ್ಟ ಹಳ್ಳಿ. ಇದೇ ಹಳ್ಳಿಯಲ್ಲಿನ ಬೊಂಬೆಗಳು ಬಿ ಎಸ್ ಯಡಿಯೂರಪ್ಪ ಬಗ್ಗೆ ಭವಿಷ್ಯ ನುಡಿದಿದ್ವಂತೆ.
ಹನುಮನಕೊಪ್ಪ.. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪುಟ್ಟ ಹಳ್ಳಿಯಲ್ಲಿ ಇಂಥ ಒಂದು ಅಚ್ಚರಿ ನಡೆಯುತ್ತೆ. ಪ್ರತಿವರ್ಷ ಯುಗಾದಿ ಪಾಡ್ಯದಂದು, ಇಲ್ಲಿರೋ ಗೊಂಬೆಗಳೇ ಒಂದು ವರ್ಷದ ಮಳೆ-ಬೆಳೆ ಬಗ್ಗೆ ಭವಿಷ್ಯ ಹೇಳ್ತವಂತೆ. ರಾಜಕಾರಣದ ಜತೆಗೆ ಧಾನ್ಯಗಳ ಧಾರಣೆ ಬಗ್ಗೆಯೂ ಈ ಜನ ಅಂದಾಜಿಸ್ತಾರಂತೆ. ಕಳೆದ ಯುಗಾದಿ ಪಾಡ್ಯದ ದಿನವೇ ರಾಜ್ಯದ ಪ್ರಮುಖ ರಾಜಕಾರಣಿಗೆ ಕಂಟಕ ಅಂತಾ ಇವೇ ಬೊಂಬೆಗಳು ಭವಿಷ್ಯ ನುಡಿದಿದ್ವಂತೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅದು ನಿಜವಾಗಿದೆ ಅಂತಿದಾರೆ ಸ್ಥಳೀಯರು.
ತುಪ್ಪರಿಹಳ್ಳದ ದಂಡೆ ಮಣ್ಣಿನಿಂದ ಯುಗಾದಿ ಫಲ ಮಾಡಲಾಗುತ್ತಂತೆ. ಫಲದ ನಾಲ್ಕೂ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿದ ಮನುಷ್ಯನ ಆಕೃತಿ ಇಟ್ಟಿದ್ರಂತೆ. ನಾಲ್ಕೂ ಮೂಲೆಗೆ ಅನ್ನದ ಉಂಡೆ, ಮಣ್ಣಿತ್ತು, ಗಣಪತಿ, ಶಿವ, ಪಾರ್ವತಿಯರ ಮೂರ್ತಿ ಮಾಡಿಟ್ಟಿರ್ತಾರಂತೆ. ಅದರ ಮಾರನೇ ದಿನ ಫಲಾಫಲ ನೋಡಿದಾಗ ನಾಲ್ಕೂ ಮೂಲೆಗಳಿಗಿಟ್ಟಿದ್ದ ಅನ್ನದ ಉಂಡೆ ಹಾಗೆಯೇ ಇದ್ವಂತೆ. ಅದರಿಂದ ಅನ್ನಕ್ಕೆ ಕೊರತೆ ಇಲ್ಲ. ಆದರೆ, ನಾಲ್ಕೂ ದಿಕ್ಕಿನಲ್ಲಿಟ್ಟಿದ್ದ ಮೂರ್ತಿಗಳಿಗೆ ಧಕ್ಕೆಯಾಗಿತ್ತಂತೆ. ಆಗ್ನೇಯ ದಿಕ್ಕಿನಲ್ಲಿದ್ದ ಕರ್ನಾಟಕದ ಮೂರ್ತಿಯ ಕಾಲು ಮುರಿದಿತ್ತಂತೆ. ಹಾಗಾಗಿಯೇ, ರಾಜ್ಯ ರಾಜಕೀಯದ ಪ್ರತಿಷ್ಠಿತ ವ್ಯಕ್ತಿ ಅಧಿಕಾರ ವಂಚಿತನಾಗ್ತಾನೆ ಅನ್ನೋದ ಭವಿಷ್ಯ ಅಂತ ಅಂದಾಜಿಸಲಾಗಿತ್ತಂತೆ.
ಸುಮಾರು 2 ಶತಮಾನದಿಂದ ಇಲ್ಲಿ ನಂಬಿಕೆ ಬೇರೂರಿದೆ. 38 ವರ್ಷದ ಹಿಂದೆ ಇಂದಿರಾ ಗಾಂಧಿ ಹತ್ಯೆಯ ಬಗ್ಗೆ ಭವಿಷ್ಯ ನಿಜವಾಗಿತ್ತಂತೆ. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಗೂ ಮೊದಲೇ ಉತ್ತರ ದಿಕ್ಕಿನ ಗೊಂಬೆ ಸಂಪೂರ್ಣ ಉರುಳಿ ಬಿದ್ದಿತ್ತಂತೆ. ಈಗ ಬಿಎಸ್‌ವೈ ಅಧಿಕಾರ ಕಳೆದುಕೊಂಡಿದಾರೆ. ಬೊಂಬೆಗಳ ಭವಿಷ್ಯ ನಿಜವಾಗಿದೆ ಅಂತಾ ಊರ ಜನ ನಂಬಿದಾರೆ.