ಹುಬ್ಬಳ್ಳಿ : ರಾಯಚೂರಿನ ನ್ಯಾಯಾಧೀಶರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಹಾಗೂ ರಾಜ್ಯದ ಸಕಲ ನ್ಯಾಯಾಲಯಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಬೇಕೆಂದು ಆಗ್ರಹಿಸಿ ನಗರದ ತಹಶೀಲ್ದಾರ್ ಕಚೇರಿ ಬಳಿ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.
ನಗರದ ಮುಖ್ಯ ಅಂಚೆ ಕಚೇರಿ ಬಳಿಯಿರುವ ಡಾ. ಅಂಬೇಡ್ಕರ್ ಪ್ರತಿಮೆ ಆವರಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ಮುಖಾಂತರ ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಜನವರಿ 26ರಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ.
ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದನ್ನು ನೋಡಿದರೇ ಮಲ್ಲಿಕಾರ್ಜುನಗೌಡ ಅವರನ್ನು ಸರ್ಕಾರವೇ ಮುಂದೆ ಬಿಟ್ಟಿದಿಯಾ ಎಂಬ ಸಂಶಯ ಜನರಲ್ಲಿ ಮೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಥಮ ಹಂತದ ಪ್ರತಿಭಟನೆ ಇದಾಗಿದೆ. 30 ದಿನಗಳಲ್ಲಿ ರಾಜ್ಯ ಸರ್ಕಾರ ಕಾನೂನು ಕ್ರಮಕೈಗೊಳಬೇಕು ಹಾಗೂ ಎಲ್ಲ ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರವಿಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಈ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಅಣಿಯಾಗಲಿದ್ದೇವೆ ಎಂದು ಎಚ್ಚರಿಸಿದರು.
ಶಾಸಕರಾದ ಪ್ರಸಾದ್ ಅಬ್ಬಯ್ಯ, ಅಲ್ತಾಪ್ ಹಳ್ಳೂರ, ಅಲ್ತಾಪ್ ನವಾಜ್ ಎಂ. ಕಿತ್ತೂರ, ಪ್ರೇಮನಾಥ ಚಿಕ್ಕತುಂಬಳ, ಚಂದ್ರಶೇಖರ್ ಗೋಕಾಕ್, ವೀರಭದ್ರಪ್ಪ ಹಾಲಹರವಿ ಸೇರಿದಂತೆ ನೂರಾರು ದಲಿತ ಮುಖಂಡರು ಉಪಸ್ಥಿತರಿದ್ದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ