ಹುಬ್ಬಳ್ಳಿ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜನತಾ ಕರ್ಫ್ಯೂ ಜಾರಿಗೆ ತಂದು ಇದೀಗ ಲಾಕ್‌ಡೌನ್ ಘೋಷಿಸಿದೆ. ಅಗತ್ಯ ವಸ್ತುಗಳ ವ್ಯವಹಾರ ಸೇರಿದಂತೆ ಕೆಲ ಕ್ಷೇತ್ರಕ್ಕೆ ಲಾಕ್ಡೌನ್ನಿಂದ ವಿನಾಯಿತಿ ಇದೆ. ಲಾಕ್‌ಡೌನ್ ಇರುವುದಿಂದ ಹೆಚ್ಚಿನ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳೆಲ್ಲವೂ ಸ್ಥಗಿತಗೊಂಡಿವೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಒಳಚರಂಡಿ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳು ಈಗ ಚುರುಕುಗೊಂಡಿವೆ.
ಮಹಾಮಾರಿ ಕೊರೊನಾ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ. ಕರ್ಫ್ಯೂ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದೆಷ್ಟೋ ಜನ ಕೂಲಿ ಕಾರ್ಮಿಕರು ಕೆಲಸವನ್ನು ಬಿಟ್ಟು ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗಿರಿದ್ದಾರೆ. ಕಾರ್ಮಿಕರಿಲ್ಲದೇ ಸ್ಥಗಿತಗೊಂಡ ಕಾಮಗಾರಿಗಳು ಅದೆಷ್ಟೋ. ಆದ್ರೆ ಹುಬ್ಬಳ್ಳಿಯ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ.
ಕಾಮಗಾರಿಗಳಿಗೆ ವೇಗ
ನಗರದ ವಿವಿಧೆಡೆ ನಡೆಯುತ್ತಿರುವ ರಸ್ತೆ, ಯುಜಿಡಿ, ಉದ್ಯಾನವನ, ನೆಹರು ಮೈದಾನ ಹಾಗು ಈಜುಕೋಳ ಕಾಮಗಾರಿಗೆ ಜನತಾ ಕರ್ಫ್ಯೂ ಎಫೆಕ್ಟ್ನಿಂದ ಹೆಚ್ಚಿನ ವೇಗ ಸಿಕ್ಕಂತಾಗಿದೆ.
ನಗರದ ಪ್ರಮುಖ ರಸ್ತೆಗಳಾದ ಕೊಪ್ಪಿಕರ ರಸ್ತೆ, ಜೆ.ಸಿ. ನಗರ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ದಾಜೀಬಾನ ಪೇಟೆ, ವೀರಾಪುರ ಓಣಿ ರಸ್ತೆ, ಅಂಚಟಗೇರಿ ಓಣಿ, ಸ್ಟೇಶನ್ ರಸ್ತೆ, ತಬೀಬ ಲ್ಯಾಂಡ್, ಮಂಟೂರ ರಸ್ತೆ, ಪ್ರಿಯದರ್ಶಿನಿ ಕಾಲೋನಿ, ಸಿಲ್ವರ ಟೌನ್, ವಿವೇಕಾನಂದ ನಗರ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಚುರುಕಾಗಿ ನಡೆಯುತ್ತಿದೆ.
ನಗರದಲ್ಲಿ ಹಲವು ಪ್ರದೇಶಗಳಲ್ಲಿ ಹೆಚ್ಚಿನ ವಾಹನ ಸಂಚಾರ ಹಾಗೂ ಜನ ದಟ್ಟಣೆ ಇರುವುದರಿಂದ ಕಾಮಗಾರಿಗಳು ನಡೆಸುವುದು ಕಷ್ಟಕರವಾಗಿತ್ತು. ಸ್ಟೇಶನ್ ರಸ್ತೆಯ ಚಂದ್ರಕಲಾ ಚಿತ್ರಮಂದಿರದ ಪಕ್ಕದ ಚರಂಡಿ ಕಾಮಗಾರಿ, ಗಣೇಶಪೇಟೆ ಸರ್ಕಲ್ ವೃತ್ತದಲ್ಲಿನ ಚರಂಡಿ ಕಾಮಗಾರಿ, ಮರಾಠ ಗಲ್ಲಿ ಸಿಬಿಟಿ ರಸ್ತೆಯ ಚರಂಡಿ ಕಾಮಗಾರಿ, ಕೊಪ್ಪಿಕರ ರಸ್ತೆ-ಕೋಯಿನ್ ರಸ್ತೆಯ ಚರಂಡಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕಳೆದ ಶುಕ್ರವಾರ ಒಂದೇ ದಿನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: 'ಟೆಸ್ಟ್ ರಿಪೋರ್ಟ್ ಕೇಳಿ ಚಿಕಿತ್ಸೆಗೆ ನಿರ್ಲಕ್ಷ್ಯ': ಕೊಪ್ಪಳದಲ್ಲಿ ಕಾರಿನಲ್ಲೇ ಕೊನೆಯುಸಿರೆಳೆದ ಮಹಿಳೆ
ಜನತಾ ಕರ್ಫ್ಯೂ, ಲಾಕ್ಡೌನ್ನಿಂದ ಸುಮಾರು ಶೇ.70 ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸುಮಾರು ಶೇ.100 ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಅನ್ಯ ರಾಜ್ಯಗಳಿಂದ ಬಂದಿರುವ ಶೇ.70 ರಷ್ಟು ಕಾರ್ಮಿಕರು ಕಾಮಗಾರಿಯಲ್ಲಿ ಪಾಲ್ಗೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ.