ಧಾರವಾಡ: ಡಿಕೆಶಿಗೆ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ನ್ಯಾಯಾಂಗದ ಕೆಲಸವನ್ನು, ಸಿಬಿಐ ಮತ್ತು ಇಡಿ ತಮ್ಮ ಕೆಲಸವನ್ನು ಮಾಡುತ್ತವೆ. ಕಾನೂನು ಪ್ರಕಾರವೇ ಬೇಲ್ ಸಿಕ್ಕಿದೆ. ಅದರಲ್ಲೇನು ವಿಶೇಷ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ವಿವಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಷಯದಲ್ಲಿಯೂ ರಾಜಕೀಯ ಬಣ್ಣ ಹಚ್ಚುವುದು ಇದ್ದೇ ಇರುತ್ತೆ. ನನ್ನ ಆದಾಯ 1 ಕೋಟಿ ಇರೋದು ಐದು ವರ್ಷಕ್ಕೆ ನೂರು ಕೋಟಿಯಾದ್ರೆ ಅದು ಅನುಮಾನಾಸ್ಪದವೋ, ಇಲ್ಲ ರಾಜಕೀಯ ಬಣ್ಣವೋ ಎಂದು ಪ್ರಶ್ನಿಸಿದರು. ಸಹಜ ರೀತಿಯಲ್ಲಿ ಬೆಳೆದರೆ ಯಾರೂ ಯಾರ ಮೇಲೆಯೂ ಅನುಮಾನ ಪಡುವುದಿಲ್ಲ. ಅಸಹಜ ರೀತಿಯಲ್ಲಿ ಬೆಳೆದರೆ ಎಲ್ಲರೂ ಎಲ್ಲರ ಮೇಲೆ ಅನುಮಾನ ಪಡ್ತಾರೆ. ನಮ್ಮ ಪಕ್ಷದ ಸಿದ್ದೇಶ್ವರ, ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ ಶೆಟ್ಟಿ, ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮನೆ ಮೇಲೆಯೂ ದಾಳಿ ಆಗಿತ್ತು. ಇವರೆಲ್ಲ ಕಾಂಗ್ರೆಸ್ಸಿಗರಾ? ಎಲ್ಲಿ ಅಕ್ರಮದ ವಾಸನೆ ಇರುತ್ತದೋ ಅಲ್ಲಿ ಅನುಮಾನದ ದೃಷ್ಟಿ ಇರುತ್ತದೆ ಎಂದರು.
ಇನ್ನು ಪ್ರವಾಹ ಕುರಿತು ಕೆಲವೇ ಕ್ಷಣಗಳಲ್ಲಿ ಸಿಎಂ ವಿಡಿಯೋ ಸಂವಾದ ಮುಗಿದ ವಿಚಾರದ ಬಗ್ಗೆ ಮಾತನಾಡಿ, ಸಿಎಂಗಿಂತ ಮುಂಚೆ ಮುಖ್ಯ ಕಾರ್ಯದರ್ಶಿ ಎಲ್ಲಾ ವಿವರ ಪಡೆದು ವರದಿ ಮಾಡಿದ್ದರು. ಔಪಚಾರಿಕ ನಿರ್ದೇಶನ ಮಾತ್ರ ಹತ್ತು ನಿಮಿಷದಲ್ಲಿ ಸಿಎಂ ಕೊಟ್ಟು ಮುಗಿಸಿದ್ದಾರೆ. ಏನು ನಿರ್ದೇಶನ ಕೊಡಬೇಕು ಕೊಟ್ಟಿದ್ದಾರೆ. ಜಾಸ್ತಿ ಹೊತ್ತು ವಿಡಿಯೋ ಸಂವಾದ ಮಾಡಿದ್ರೂ ಟೀಕೆ ಮಾಡುತ್ತಿದ್ದರು ಎಂದು ಹೇಳಿದರು.