ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿನ 2021ರ ಮುಂಗಾರು ಹಂಗಾಮಿನ ಕೆಂಪು ಮೆಣಸಿನಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರ ಒಟ್ಟು 20.69 ಕೋಟಿ ರೂ ವಿಮೆ ಮೊತ್ತ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2021ನೇ ಸಾಲಿನ ಮುಂಗಾರಿನ ಅವಧಿಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದರಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರ ಕೃಷಿ ಜಮೀನುಗಳಲ್ಲಿ ಬೆಳೆ ಹಾನಿಯಾಗಿದೆ. ಅವುಗಳಿಗೆ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರ ಒದಗಿಸುವಂತೆ ರಾಜ್ಯದ ಕೃಷಿ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಕೋರಿಕೊಂಡಿದ್ದೆ ಎಂದು ತಿಳಿಸಿದ್ದಾರೆ.
ಒಟ್ಟು ವಿಮೆ ಮಾಡಿಸಿದ ಕೆಂಪು ಮೆಣಸಿನ ಕಾಯಿ ಬೆಳೆ ಪ್ರದೇಶ ಜಿಲ್ಲೆಯಲ್ಲಿ 13,068 ಹೆಕ್ಟೇರ್ ಪ್ರದೇಶವಾಗಿದ್ದು, 12934 ರೈತರು 4.7 ಕೋಟಿ ಪ್ರೀಮಿಯಂ ಭರಣ ಮಾಡಿದ್ದರು. ವಿಮೆ ಮಾಡಿಸಿದ ಎಲ್ಲ ರೈತರುಗಳಿಗೂ ತತ್‍ಕ್ಷಣ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಐಸಿಐಸಿಐ ಲುಂಬಾರ್ಡ ಕಂಪನಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಗಿತ್ತು. ಇದರ ಫಲವಾಗಿ, ಜಿಲ್ಲೆಯ ರೈತರಿಗೆ ವಿಮೆ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ. ಬಹು ಹಂತದ ಸಂಪೂರ್ಣ ಬೆಳೆ ಕಟಾವು ಸಮೀಕ್ಷೆ ವರದಿ ಸಿದ್ಧಪಡಿಸಿ ಸಲ್ಲಿಸಿದ ನಂತರ ಉಳಿದ ವಿಮೆ ಸಂಪೂರ್ಣ ಮೊತ್ತ ದೊರೆಯುತ್ತದೆ.
ಇನ್ನುಳಿದ ಬೆಳೆಗಳ ವಿಮಾ ಬಿಡುಗಡೆಗೆ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ಆ ಬೆಳೆಗಳಿಗೂ ಕೂಡಾ ವಿಮೆ ದೊರೆಯುವ ಆಶಾ ಭಾವನೆ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.