ಧಾರವಾಡ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ವಿತರಣೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂದು ಜಿಲ್ಲೆಯ ರೈತರು ಆರೋಪಿಸಿದ್ದಾರೆ.
ಜಿಲ್ಲೆಯ ನಿಗದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬೆನಕನಕಟ್ಟಿ ಮತ್ತು ಬಾಡ ಗ್ರಾಮದ ನೂರಾರು ರೈತರಿಗೆ ಕೇವಲ 17%ರಷ್ಟು ಬೆಳೆ ವಿಮೆಯನ್ನ ಮಾತ್ರ ನೀಡಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.
ಬರಗಾಲ ಇರುವ ಈ ಸಮಯದಲ್ಲಿ ಈ ರೀತಿ ಅನ್ಯಾಯ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿಗದಿತ ಪಂಚಾಯತಿ ವ್ಯಾಪ್ತಿಯಲ್ಲಿ ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ಪಕ್ಕದ ಗ್ರಾಮ ಪಂಚಾಯತಿಗಳಾದ ದೇವರಹುಬ್ಬಳ್ಳಿ, ಹಳ್ಳಿಗೇರಿ, ಮನಗುಂಡಿ, ಮನಸೂರು ವ್ಯಾಪ್ತಿಗಳಲ್ಲಿ ಕ್ರಮವಾಗಿ ಶೇ. 64, 81, 80ರಷ್ಟು ಬೆಳೆ ವಿಮೆ ಬಂದಿದೆ ಎಂದು ಆರೋಪಿಸಿದರು.
ಆ ಎಲ್ಲಾ ಗ್ರಾಮಗಳಲ್ಲಿ ಅಷ್ಟು ಬೆಳೆ ವಿಮೆ ಬಂದಿದೆ. ನಮ್ಮ ಹಳ್ಳಿಗಳ ರೈತರಿಗೆ ಮಾತ್ರ ಅನ್ಯಾಯ ಎಸಗಿದ್ದಾರೆ. ಇದು ಸರ್ಕಾರದಿಂದ ಆಗಿರುವ ಯಡವಟ್ಟೋ ಅಥವಾ ಅಧಿಕಾರಿಗಳಿಂದ ಆಗಿದೆಯೋ, ತಾಂತ್ರಿಕ ದೋಷದಿಂದ ಕೂಡಿದೆಯೋ ಗೊತ್ತಿಲ್ಲ. ಆದಷ್ಟು ಬೇಗ ಇದನ್ನ ಸರಿಪಡಿಸಿ ಎಲ್ಲರಂತೆ ನಮಗೂ ನ್ಯಾಯ ಒದಗಿಸಬೇಕು. ಸಮಸ್ಯೆ ಬಗೆಹರಿಸಿ ಜಿಲ್ಲಾಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.