ಧಾರವಾಡ: "ನಗರದ ರಾಯಪುರದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕಚೇರಿಯಲ್ಲಿ ಅಕ್ಟೋಬರ್ 24ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ" ಎಂದು ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದ್ದಾರೆ. ಧಾರವಾಡದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳ ಪರಿಶೀಲನೆ ಮಾಡಿದಾಗ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಯಾವುದೇ ಕುರುಹು ಸಹ ಪೊಲೀಸರಿಗೆ ಸಿಕ್ಕಿರಲಿಲ್ಲ" ಎಂದರು.
"ಹಿರಿಯ ಅಧಿಕಾರಿಗಳೆಲ್ಲರೂ ಚರ್ಚೆ ನಡೆಸಿ ವಿಶೇಷ ತಂಡವೊಂದನ್ನು ರಚಿಸಿದ್ದೆವು. ವಿದ್ಯಾನಗರ ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ನೇತೃತ್ವದಲ್ಲಿ ತಂಡವನ್ನು ಮಾಡಿದ್ದೆವು. ತಂಡವು ಯಾವುದೇ ಕುರುಹುಗಳಿಲ್ಲದ ಈ ಪ್ರಕರಣವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿ, ಎಲ್ಲ ಪೊಲೀಸರ ಸಹಯೋಗದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸಿ 79,89,870 ಲಕ್ಷ ನಗದು ಮತ್ತು ಅಪರಾಧಕ್ಕಾಗಿ ಬಳಸಿದ್ದ ಕಾರು, ಮೊಬೈಲ್ ಸೇರಿ 85,89,770 ಲಕ್ಷ ರೂ. ಸೊತ್ತನ್ನು ವಶಪಡಿಕೊಂಡಿದ್ದೇವೆ. ಬಂಧಿತ ಆರೋಪಿಗಳಲ್ಲಿ ಮೂವರು ಆ ಟ್ರಸ್ಟ್ನಲ್ಲಿಯೇ ಕೆಲಸ ಮಾಡುತ್ತಿದ್ದರು" ಎಂದು ತಿಳಿಸಿದರು.
"ಕುಶಾಲ್ ಕುಮಾರ್, ಬಸವರಾಜ್, ಮಹಾಂತೇಶ್ ಟ್ರಸ್ಟ್ನ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಾಥಮಿಕವಾಗಿ ಇವರು ಕಳ್ಳತನಕ್ಕೆ ಯೋಜನೆಯನ್ನು ಮಾಡಿಕೊಂಡು ಇತರೆ 7 ಮಂದಿ ಆರೋಪಿಗಳನ್ನು ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ. ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ ಅಜ್ಯದ ಮತ್ತು ವೀರೇಶ ಇನ್ನುಳಿದ ಆರೋಪಿಗಳಾಗಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯ ರೈಫಲ್ ಕಸಿದು ಗುಂಡು ಹಾರಿಸಿದ ದುಷ್ಕರ್ಮಿಗಳು!
ಇತ್ತೀಚಿನ ಪ್ರಕರಣ- ವಿದೇಶಿ ಕಳ್ಳರ ಬಂಧನ: ಇತ್ತೀಚಿಗೆ, ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ವಿದೇಶಿ ಮೂಲದ ಕಳ್ಳರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದರು. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಇವರು ಹಣ ದೋಚುತ್ತಿದ್ದರು. ಬೆಳಗಾವಿಯಿಂದ ಹುಬ್ಬಳ್ಳಿ ಮೂಲಕ ದೆಹಲಿ ಪಾಸಿಂಗ್ ಇರುವ ಕಾರಿನಲ್ಲಿ ಬೇರೆಡೆ ತೆರಳುತ್ತಿದ್ದಾಗ ವಶಕ್ಕೆ ಪಡೆಯಲಾಗಿತ್ತು. ಕಳೆದ ಹಲವು ದಿನಗಳಿಂದ ಬೆಳಗಾವಿಯಲ್ಲಿ ಕಳ್ಳತನ ಮಾಡುತ್ತಿದ್ದರು. ಬೆಳಗಾವಿ ಪೊಲೀಸರ ಮಾಹಿತಿ ಮೇರೆಗೆ ಹುಬ್ಬಳ್ಳಿಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿತ್ತು.
ದರೋಡೆ- ದುಷ್ಕರ್ಮಿಗಳೊಂದಿಗೆ ಗುದ್ದಾಡಿ ಗೆದ್ದ ಮಾಲೀಕ: ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಸೋಮವಾರ (ಅಕ್ಟೋಬರ್ 16-2023) ಬೆಳಿಗ್ಗೆ ನಡೆದಿತ್ತು. ಪ್ರಶಾಂತ್ ಹೊನರಾವ್ ಎಂಬವರಿಗೆ ಸೇರಿದ ಸಂತೋಷಿ ಜ್ಯುವೆಲ್ಲರಿಯಲ್ಲಿ ಘಟನೆ ನಡೆದಿತ್ತು. ಎಂದಿನಂತೆ ಬಾಗಿಲು ತೆರೆದಿದ್ದ ಪ್ರಶಾಂತ, ಅಂಗಡಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಂಗಡಿಗೆ ನುಗ್ಗಿದ್ದರು. ಒಬ್ಬ ಪಿಸ್ತೂಲಿನಿಂದ ಹೆದರಿಸಿ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ್ದ. ಪ್ರಶಾಂತ ಪ್ರತಿರೋಧ ತೋರುತ್ತಿದ್ದಂತೆ ದರೋಡೆಕೋರರು ಹಲ್ಲೆಗೆ ಮುಂದಾಗಿದ್ದರು. ಇದಕ್ಕೆ ಪ್ರತಿರೋಧ ಒಡ್ಡಿದ್ದರಿಂದ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದರು.