ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಖ್ಯಾತಿ ಗಳಿಸಿರುವ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವಳಿ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ ಹಾಗೂ ಸಣ್ಣ-ಪುಟ್ಟ ವಿಷಯಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅಪರಾಧ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇವೆ. ಇದು ಇಲ್ಲಿನ ಜನರ ನಿದ್ದೆಗೆಡಿಸಿದೆ.
ಇದನ್ನೂ ಓದಿ: ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸಹೋದರಿಗೆ ಸುತ್ತಿಗೆಯಿಂದ ಹೊಡೆದ ಕಿಡಿಗೇಡಿ: ಸಿಸಿಟಿವಿ ದೃಶ್ಯ
ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಪೊಲೀಸರು ಎಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ, ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಕೊಲೆ, ದರೋಡೆ, ಚಾಕು ಇರಿತ, ಮೀಟರ್ ಬಡ್ಡಿ ಕುಳಗಳ ಅಟ್ಟಹಾಸ ಮಿತಿಮೀರಿದೆ. ಅದರಲ್ಲೂ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 38 ಕೊಲೆ ಪ್ರಕರಣಗಳು ನಡೆದಿವೆ ಅನ್ನೋದು ಗಂಭೀರ ವಿಚಾರ.
ಪೊಲೀಸರ ವೈಫಲ್ಯ?: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಇದಕ್ಕೆ ಉದಾಹರಣೆ ಗುರೂಜಿ ಚಂದ್ರಶೇಖರ ಹತ್ಯೆ ಹಾಗೂ ಹೆಣ್ಣು, ಹೊನ್ನು, ಮಣ್ಣು ವಿಚಾರವಾಗಿ ಒಂದಷ್ಟು ಕೊಲೆಗಳು ನಡೆದಿದ್ದರೆ, ಮತ್ತಷ್ಟು ಕೊಲೆಗಳು ಮೀಟರ್ ಬಡ್ಡಿ, ಹಳೇ ವೈಷಮ್ಯ, ಗುಟ್ಕಾ, ಸಿಗರೇಟ್, ಎಗ್‌ರೈಸ್‌ನಂತಹ ಕುಲ್ಲಕ ಕಾರಣಕ್ಕೂ ಕೊಲೆ ನಡೆದಿರುವುದು ವಿಪರ್ಯಾಸ. ಇದಕ್ಕೆಲ್ಲ ಗೃಹ ಇಲಾಖೆ ಹಾಗೂ ಪೊಲೀಸರ ವೈಫಲ್ಯವೇ ಕಾರಣ ಎಂಬ ಆರೋಪಗಳಿವೆ.
ದುಷ್ಕೃತ್ಯಗಳು ನಡೆದಾಗ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದು ಬಿಟ್ಟರೆ, ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು, ಅವಳಿ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋದು ಸಂತೋಷದ ವಿಚಾರ. ಆದರೆ, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಯಾಕೆ ವಿಫಲಾಗುತ್ತಿದ್ದಾರೆ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ: ಅಪರಾಧ ಪ್ರಕರಣಗಳ ಹೆಚ್ಚಳದಿಂದ ಜನರು ಯಾವ ಸಮಯದಲ್ಲಿ ಏನಾಗುತ್ತದೆಯೋ ಎಂಬ ಆತಂಕದಲ್ಲೇ ಓಡಾಡುವಂತಾಗಿದೆ. ಇನ್ನಾದರೂ ರಾಜ್ಯದ ಗೃಹ ಸಚಿವರು ಹಾಗೂ ಪೊಲೀಸ್ ಕಮೀಷನರ್ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧ್ವನಿಗೂಡಿಸಿದ್ದು, ಅವಳಿ ನಗರದಲ್ಲಿ ಕಾನೂನು ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜರುಗಿಸಿ ಕ್ರಮ ಕೈಗೊಳ್ಳಬೇಕು. ಬಿಗಿ ಕ್ರಮಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅವಾಚ್ಯ ಪದಗಳಿಂದ ತಾಯಿಗೆ ನಿಂದಿಸುತ್ತಿದ್ದ ಮಗ.. ಕೆರಳಿದ ಅಪ್ಪನಿಂದ ಪುತ್ರನಿಗೆ ಚಾಕು ಇರಿತ