ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಕಸಬಾಪೇಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಮೂಲದ ಪ್ರಶಾಂತ್ ದೇಶಪಾಂಡೆ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಈತ ಹಳೇಹುಬ್ಬಳ್ಳಿ ನೇಕಾರ ನಗರದ ವ್ಯಕ್ತಿಗೆ ರೈಲ್ವೆ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದಾರೆ. ಈಗಾಗಲೇ ಅನೇಕ ಜನರಿಗೆ ನೌಕರಿ ಕೊಡಿಸಿರುವುದಾಗಿ ಸುಳ್ಳು ನೇಮಕಾತಿ ಪತ್ರ ಮತ್ತು ಜಾಯ್ನಿಂಗ್ ಲೆಟರ್ ತೋರಿಸಿ ನಂಬಿಕೆ ಬರುವಂತೆ ಮಾಡಿದ್ದನು. ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 31.14 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ. ಈ ಸಂಬಂದ ವಂಚನೆಗೊಳಗಾದ ವ್ಯಕ್ತಿ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ವಿಶೇಷ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದೆ. ಈ ಆರೋಪಿಯ ಮೇಲೆ ಶಿವಮೊಗ್ಗ ರಿಪ್ಪನ್ ಪೇಟೆ ಪೊಲೀಸ್ ಠಾಣೆ, ಬಾಗಲಕೋಟೆ ನವನಗರ ಠಾಣೆ ಸೇರಿ ರಾಜ್ಯದ ಅನೇಕ ಕಡೆ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಹುಬ್ಬಳ್ಳಿ -ಧಾರಾವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ರೈಲ್ವೆಯಲ್ಲಿ ಉದ್ಯೋಗ ಭರವಸೆ; ಮಹಿಳೆಯ ವಿರುದ್ಧ ಹಣ ಪಡೆದು ವಂಚನೆ ಆರೋಪ