ಧಾರವಾಡ : ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಧಾರವಾಡದಲ್ಲಿ ಸ್ವಂತ ತಂಪು ಪಾನೀಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ಸಿಲೋನ್ ಬೇವರೆಜಸ್ ಕ್ಯಾನ್ ಕಂಪನಿ ಮೂಲಕ ತಂಪು ಪಾನೀಯ ಮತ್ತು ಎನರ್ಜಿ ಡ್ರಿಂಕ್ ಉತ್ಪಾದನಾ ಉದ್ಯಮದಲ್ಲಿ ತೊಡಗಿರುವ ಅವರು ಧಾರವಾಡದಲ್ಲಿ ತಮ್ಮದೇ ತಂಪು ಪಾನೀಯ ಉದ್ಯಮ ಆರಂಭಿಸಲಿದ್ದಾರೆ.
ಈ ಸಂಬಂಧ ಕಳೆದ ವಾರವಷ್ಟೇ ಮುತ್ತಯ್ಯ ಮುರಳೀಧರನ್ ಅವರು ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಬಳಿ ಇರುವ ಜಮೀನು ವೀಕ್ಷಣೆ ಮಾಡಿ ಹೋಗಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಎಫ್ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದಾರೆ. ಮೊದಲ ಹಂತದಲ್ಲಿ 256.30 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದಾರೆ. ಇದಕ್ಕಾಗಿ 15 ಎಕರೆ ಭೂಮಿ ಒದಗಿಸಲಾಗುತ್ತಿದ್ದು, ಒಟ್ಟು ಮೂರು ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ಯೋಜಿಸಿದೆ. ಇದಕ್ಕಾಗಿ 32 ರಿಂದ 36 ಎಕರೆ ಭೂಮಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ಮೂಲಕ ಸುಮಾರು 200 ಜನರಿಗೆ ಇಲ್ಲಿ ಉದ್ಯೋಗವಕಾಶ ಲಭ್ಯವಾಗಲಿದೆ.
ಮುರಳೀಧರನ್ ಕಳೆದ ಆ.5 ರಂದು ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸಿದ್ದಾರೆ. ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದೆ. ಸಪ್ಟೆಂಬರ್ ಕೊನೆಯ ವಾರದಲ್ಲಿ ಕೆಲಸ ಆರಂಭವಾಗುವ ಸಾಧ್ಯತೆಯಿದೆ ಎಂದು ಕೆಐಎಡಿಬಿ ಅಧಿಕಾರಿ ಬಿ.ಟಿ. ಪಾಟೀಲ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿ: ಸಿಎಂ ಆಗಮನ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ರಸ್ತೆ ದುರಸ್ತಿ- ಜನಸಾಮಾನ್ಯರ ಆಕ್ರೋಶ