ಧಾರವಾಡ: ರಾಜ್ಯ ಸರ್ಕಾರ ನೀಡಿರುವ ಆದೇಶದಂತೆ ಧಾರವಾಡ ಜಿಲ್ಲಾಡಳಿತವು ಇಂದಿನಿಂದ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಪಲಾನುಭವಿಗಳಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಆರಂಭಿಸಿದ್ದು, ಇಂದು ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಬೆಳಗಾವಿಯ ಪ್ರಾದೇಶಿಕ ಔಷಧ ದಾಸ್ತಾನು ಉಗ್ರಾಣದಿಂದ ಲಸಿಕೆಯು ಇಂದು ಮಧ್ಯಾಹ್ನ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ಔಷಧ ದಾಸ್ತಾನು ಉಗ್ರಾಣಕ್ಕೆ ಬಂದು ತಲುಪಿತು. ನಂತರ ನಿಗದಿತ ಲಸಿಕಾ ಕೇಂದ್ರಗಳಿಗೆ ತಲುಪಿಸಲಾಗಿದ್ದು, ಇಂದು ಧಾರವಾಡ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ಸೆಷನ್ನಲ್ಲಿ ಈಗಾಗಲೇ ನೋಂದಾಯಿತರಾದ 150 ಜನ ಪಲಾನುಭವಿಗಳಿಗೆ ಲಸಿಕೆ ನೀಡಲಾಯಿತು.
ಆರ್ಸಿಎಚ್ಓ ಡಾ.ಎಸ್.ಎಮ್. ಹೊನಕೇರಿ ಮಾತನಾಡಿ, ಸೆಷನ್ ಆರಂಭಿಸಿದ 5 ರಿಂದ 10 ನಿಮಿಷದಲ್ಲಿ ನೋಂದಾಯಿತ ಪಲಾನುಭವಿಗಳ ಪೈಕಿ ಇಂದಿನ ನಿಗದಿತ ಗುರಿಯಂತೆ 150 ಜನರು ಇಂದಿನ ಸೆಷನ್ ಅವಧಿ ಆಯ್ಕೆ ಮಾಡಿಕೊಂಡರು. ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಲಸಿಕಾಕರಣ ಆರಂಭಿಸಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಾಗೂ ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಾಯಿತರಾಗಿರುವ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಅರ್ಹರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕಾಕರಣಕ್ಕೆ ಬರುವವರು ತಪ್ಪದೇ ಮಾಸ್ಕ್ ಧರಿಸಿರಬೇಕು ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ ಮಾತನಾಡಿ, ಜಿಲ್ಲೆಯ ಅರ್ಹ ಪಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಜಿ.ಪಂ.ಸಿಇಒ ಡಾ.ಬಿ.ಸುಶೀಲಾ ಅವರು ಈಗಾಗಲೇ ಲಸಿಕಾಕರಣದ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿ, ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಕೊರೊನಾ ವಾರಿಯರ್ಸ್ಗಳಾಗಿರುವ ಪತ್ರಕರ್ತರು ಸೇರಿದಂತೆ ಎಲ್ಲ ಅರ್ಹ ಪಲಾನುಭವಿಗಳಿಗೆ ಲಸಿಕೆಯನ್ನು ಮಾರ್ಗಸೂಚಿಗಳ ಪ್ರಕಾರ ನೀಡುವಂತೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದರು.