ಧಾರವಾಡ: ಇಲ್ಲಿನ ಮಹಾನಗರ ಪಾಲಿಕೆ ವಲಯ 2 ರ ವ್ಯಾಪ್ತಿಯಲ್ಲಿನ ರಾಯಲ್ ಕಮ್ಯುನಿಟಿ ಹಾಲ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್, ಕಂದಾಯ ಇಲಾಖೆ ಹಾಗೂ ಮಹಾ ನಗರಪಾಲಿಕೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ಅರ್ಜಿದಾರರು ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಭೀಮಪ್ಪ ಜಿ.ಬಾಂಬೆ ಎಂಬುವರು ಏಪ್ರಿಲ್ 20 ರಂದು ಅರ್ಜಿ ಸಲ್ಲಿಸಿ, ಅಂದು ಜಾರಿಯಲ್ಲಿದ್ದ ನಿಯಮಗಳ ಪ್ರಕಾರ 100 ಜನ ಅತಿಥಿಗಳನ್ನು ಆಹ್ವಾನಿಸಲು ಅನುಮತಿ ಪಡೆದಿದ್ದರು.
ನಿನ್ನೆ ಏಪ್ರಿಲ್ 21 ರಿಂದ ಜಾರಿಗೊಂಡ ಹೊಸ ಮಾರ್ಗಸೂಚಿಗಳ ಪ್ರಕಾರ ಈ ಮಿತಿಯು 50ಕ್ಕೆ ಸೀಮಿತವಾಗಿದೆ.
ಇಂದು (ಏ.22) ರಂದು ಮಧ್ಯಾಹ್ನ ಧಾರವಾಡ ಶಹರ ಎಸಿಪಿ ಅನುಷಾ, ತಹಶೀಲ್ದಾರ್ ಡಾ.ಸಂತೋಷಕುಮಾರ್ ಬಿರಾದಾರ ಹಾಗೂ ಮಹಾನಗರಪಾಲಿಕೆ ಎರಡನೇ ವಲಯ ಅಧಿಕಾರಿ ಪಿಬಿಎಂ ಮಹೇಶ ಭೇಟಿ ನೀಡಿದಾಗ ಅಲ್ಲಿ 200 ಕ್ಕಿಂತ ಅಧಿಕ ಜನರು ಸೇರಿದ್ದು ಕಂಡು ಬಂದಿತು.
ಪಾಲಿಕೆಯ ಅಧಿಕಾರಿಗಳು ನೀಡಿದ ದೂರು ಆಧರಿಸಿ ಶಹರ ಪೊಲೀಸ್ ಠಾಣೆ ಅಧಿಕಾರಿಗಳು ಮದುವೆ ಮನೆಯ ಅರ್ಜಿದಾರರು ಹಾಗೂ ಕಲ್ಯಾಣ ಮಂಟಪದ ಸಂಘಟಕರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ:
ಜಿಲ್ಲೆಯ ಯಾವುದೇ ಒಳಾಂಗಣ ಸಭಾಂಗಣಗಳು ಅಥವಾ ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಈ ನಿಯಮ ಪಾಲನೆಯ ಕುರಿತು ನಿರಂತರ ಪರಿಶೀಲನೆ ನಡೆಯುತ್ತಿರುತ್ತದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಇಂತಹ ಮದುವೆ ಸಮಾರಂಭಗಳು ಕಂಡು ಬಂದರೆ ಕಂದಾಯ, ಪೊಲೀಸ್ ಅಥವಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಕೋರಿದ್ದಾರೆ.