ಧಾರವಾಡ: ಜಿಲ್ಲೆಯಲ್ಲಿ ವಿವಾಹ ಸಮಾರಂಭಗಳನ್ನು ಚೌಟರಿ, ಹಾಲ್, ಹೋಟೆಲ್ಗಳಲ್ಲಿ ಆಯೋಜಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅನುಮತಿ ನೀಡಿದ್ದಾರೆ. ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 21 ರಿಂದ ಜುಲೈ 5ರ ವರೆಗೆ ಲಾಕ್‍ಡೌನ್ ಜಾರಿಯಲ್ಲಿರಲಿದೆ.
ಆದರೆ, ಸಾರ್ವಜನಿಕರಿಗೆ ಈಗಾಗಲೇ ಮನೆಯಲ್ಲಿ ಮದುವೆ ಸಮಾರಂಭಗಳನ್ನು ಜರುಗಿಸಲು ಅನುಮತಿ ನೀಡಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಈಗ ಮದುವೆಗಳನ್ನು ಚೌಟರಿ, ಹೋಟೆಲ್, ಫಂಕ್ಷನ್ ಹಾಲ್ ಗಳಲ್ಲಿ ಆಯೋಜಿಸಲು ಡಿಸಿ ಅನುಮತಿ ನೀಡಿದ್ದಾರೆ.
ಜೂನ್ 28 ರಿಂದ ಜರುಗಲಿರುವ ಮದುವೆ ಸಮಾರಂಭಗಳನ್ನು ಚೌಟರಿ, ಹೋಟೆಲ್, ಫಂಕ್ಷನ್ ಹಾಲ್ಗಳಲ್ಲಿ ಗರಿಷ್ಠ 40 ಜನರಿಗೆ ಮೀರದಂತೆ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ. ಅನುಮತಿಗಾಗಿ www.supportdharwad.in ಸೈಟ್ನಲ್ಲಿ ಆಧಾರ ಕಾರ್ಡ್ ಹಾಗೂ ಮದುವೆಯ ಕಾರ್ಡ್ನೊಂದಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರೊಳಗಾಗಿ ಮದುವೆ ನಡೆಯುವ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬಹುದಾಗಿದೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ನೀಡಲಾದ ಅನುಮತಿ ಪತ್ರ ಪಡೆದ ನಂತರ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಲಯ ಸಹಾಯಕ ಆಯುಕ್ತರುಗಳಿಂದ ಹಾಗೂ ತಾಲೂಕುಗಳ ತಹಶೀಲ್ದಾರರಿಂದ 40 ಜನರಿಗೆ ಗುರುತಿನ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶದಲ್ಲಿ ತಿಳಿಸಿದ್ದಾರೆ.
ಓದಿ: ಧಾರವಾಡದಲ್ಲಿ ನೂಕು - ನುಗ್ಗಲು ಬೆನ್ನಲ್ಲೇ ಲಸಿಕಾ ಕೇಂದ್ರದ ಬಾಗಿಲು ಓಪನ್.. ವ್ಯಾಕ್ಸಿನೇಷನ್ ಆರಂಭ